ಉತ್ತರ ಪ್ರದೇಶ, ಮಾ. 29: ಮೊಬೈಲ್ ಫೋನ್ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯವೂ ಇದೆ. ಅಷ್ಟೇ ಅಲ್ಲ, ಪ್ರಾಣಹಾನಿಯೂ ಇದೆ. ಈಗಾಗಲೇ ಹಲವಾರು ಘಟನೆಗಳು ನಡೆದು ಹಲವಾರು ಪ್ರಾಣ ಹಾನಿಯೂ ಆಗಿದೆ.
ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಬ್ಯಾಟರಿ ಸ್ಫೋಟಗೊಂಡ ಪರಿಣಾಮ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮುಖದ ಬಳಿ ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಬಾಲಕ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ.
ಬಾಲಕ ಮೊಬೈಲ್ ಫೋನ್ ಜಾರ್ಜ್ಗೆ ಹಾಕಿದ್ದ. ಅದು ಚಾರ್ಜ್ ಆಗಿದೆಯೋ ಇಲ್ಲವೋ ಎಂದು ನೋಡಲು ಫೋನ್ ಕೈಗೆತ್ತಿಕೊಂಡಿದ್ದ ಅದೇ ವೇಳೆ ಬ್ಯಾಟರಿ ಬ್ಲಾಸ್ಟ್ ಆಗಿದ್ದು, ಬಾಲಕ ಮೋನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಮುಖ ಛಿದ್ರಗೊಂಡ ಹಿನ್ನೆಲೆಯಲ್ಲಿ ಮೃತನಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಿರ್ಜಾಪುರ ಜಿಲ್ಲೆಯ ಹಳಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮತ್ವಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ಶಬ್ದ ಕೇಳುತ್ತಿದ್ದಂತೆಯೇ ಪಾಲಕರು ಬಂದು ನೋಡುವಾಗ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.ಅಷ್ಟರಲ್ಲೇ ಬಾಲಕ ಮೃತನಾಗಿದ್ದಾನೆ.