ಕೊರೋನಾ ನಿಯಂತ್ರಣದ ಬಗ್ಗೆ ಇಂದು ಎಲ್ಲಾ ರಾಜ್ಯ ಸಿಎಂ ಗಳ ಜೊತೆ ಮೋದಿ ಸಭೆ

ಬೆಂಗಳೂರು, ಮಾ. 17: ದೇಶದಾದ್ಯಂತ ಕೊರೊನಾ ಆರ್ಭಟ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ನಿರ್ಧಾರ ಕೈಗೊಳ್ಳುವ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ. ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಿಧಾನಸೌಧದ ಕಚೇರಿಯಿಂದ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿತ್ತುರುವ ಬಗ್ಗೆ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳ ಕುರಿತಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಕೊರೊನಾ ಸೋಂಕು ಏರುಗತಿಯಲ್ಲಿ ಸಾಗಲಾರಂಭಿಸಿದರೆ ಹೇಗೆ ನಿಯಂತ್ರಿಸಬೇಕು? ಲಾಕ್ ಡೌನ್ ಮಾಡಬೇಕಾ, ಬೇಡವಾ? ಎರಡನೇ ಅಲೆ ತಡೆಗಟ್ಟಲು ತೆಗೆದುಕೊಂಡಿರುವ ನಿರ್ಣಯಗಳೇನು? ಎಂಬಿತ್ಯಾದಿ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾಗಲಿವೆ. ಪ್ರಧಾನ ಮಂತ್ರಿ ಸೂಚನೆ ಮೇರೆಗೆ ಲಾಕ್‌ಡೌನ್ ಅಥವಾ ನೈಟ್ ಕರ್ಫ್ಯೂ ಭವಿಷ್ಯ ನಿರ್ಧಾರವಾಗಲಿದೆಯಾದರೂ ತಜ್ಞರು ರಾಜ್ಯದಲ್ಲಿ ಸದ್ಯಕ್ಕೆ ಲಾಕ್‌ಡೌನ್ ಮಾಡದಂತೆ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಕೆಲವೊಂದು ಮಾರ್ಗಸೂಚಿಗಳು ಜಾರಿಯಲ್ಲಿದ್ದು, ಮಾಸ್ಕ್ ಧರಿಸದೇ ಇರುವವರ ವಿರುದ್ಧ ದಂಡ ವಿಧಿಸುತ್ತಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರದಿರುವಿಕ್ಕೆ, ಸಭೆ ಸಮಾರಂಭಗಳಿಗೆ ಸೀಮಿತ ಜನರ ಅವಕಾಶಗಳನ್ನು ನೀಡಿದೆ. ಇದೆಲ್ಲದರೊಟ್ಟಿಗೆ ಪ್ರತಿನಿತ್ಯ ಸುಮಾರು ಮೂರೂವರೆ ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡುವುದು, ಕೊವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳ ಮಾಡುವುದು, ಹೊರರಾಜ್ಯಗಳಿಂದ ಆಗಮಿಸುವವರಿಗೆ ನೆಗೆಟಿವ್​ ವರದಿ ಇದ್ದರೆ ಮಾತ್ರ ಪ್ರವೇಶ ನೀಡುವುದು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವ ಯೋಚನೆಯಲ್ಲಿ ಸರ್ಕಾರ ಇದೆ.

ಏಪ್ರಿಲ್​ ಅಂತ್ಯದ ತನಕವೂ ಕಟ್ಟೆಚ್ಚರ ವಹಿಸಲು ಕ್ರಮ ಕೈಗೊಳ್ಳುವುದಾಗಿ ಪ್ರಧಾನಿಯೊಂದಿಗಿನ ಸಭೆಯಲ್ಲಿ ಬಿ.ಎಸ್​.ಯಡಿಯೂರಪ್ಪ ಪ್ರಸ್ತಾಪಿಸಲಿದ್ದು, ಪ್ರಧಾನಿ ನೀಡುವ ಸಲಹೆ ಮೇರೆಗೆ ಕೆಲವೊಂದು ನಿಯಮಗಳನ್ನ ಜಾರಿಗೆ ತರುಲಿದ್ದಾರೆ ಎನ್ನಲಾಗುತ್ತಿದೆ

Exit mobile version