ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ – ರಾಜ್ಯೋತ್ಸವಕ್ಕೆ ಮೋದಿ ಶುಭಾಶಯ

ಈ ಕನ್ನಡ ರಾಜ್ಯೋತ್ಸವದಂದು (Kannada Rajyotsava) ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ . ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ (Karnataka) ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ.

ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ.

1973 ರ ನವೆಂಬರ್ (November) 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ 50 ವಸಂತಗಳು ಸಂದಿವೆ. ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡಭಾಷೆಯಷ್ಟೇ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಲಿ, ಈ ದಿನ ಕನ್ನಡಿಗರ ಪಾಲಿನ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ ಎಂದು ಶುಭ ಹಾರೈಸಿದ್ದಾರೆ.

ಇನ್ನು ಜೆಡಿಎಸ್ (JDS) ನಾಯಕ ಎಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು, ನಾಡಿನ ಹಾಗೂ ಜಗತ್ತಿನೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಬಂಧುಗಳಿಗೆ 68ನೇ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆಯೇ, ‘ಕರ್ನಾಟಕ’ವೆಂದು ಹೆಸರಾಗಿ ಇಂದಿಗೆ 50 ವರ್ಷ. ಸಾಧಿಸಿದ್ದು ಸಾಕಷ್ಟು, ಸಾಧಿಸಬೇಕಾದದ್ದು ಬಹಳಷ್ಟು. ಕನಸು ನನಸುಗಳ ಈ ಮಹಾಯಾನದಲ್ಲಿ ಸಾರ್ಥಕ ಹೆಜ್ಜೆಗಳನ್ನು ಇಡುತ್ತಾ ಕನ್ನಡಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರೈಸೋಣ.

ಪ್ರತಿ ಹೊಸಿಲಿನಲ್ಲಿಯೂ ಕನ್ನಡದ ನಂದಾದೀಪ ಬೆಳಗಲಿ, ಆ ಹೊನಲು ಜಗವೆಲ್ಲಾ ತುಂಬಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ಅದೇ ರೀತಿ ಮಾಜಿ ಸಿಎಂ ಯಡಿಯೂರಪ್ಪನವರು (Yadiyurappa), ನಾಡಿನ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರ ಸಂಸ್ಮರಣೆಗಳ ಜೊತೆಗೆ ಕನ್ನಡ ಉಳಿಸುವ, ಬೆಳೆಸುವ ದೃಢಸಂಕಲ್ಪ ಸದಾ ನಮ್ಮದಾಗಿರಲಿ. ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಅಭಿಮಾನಪೂರ್ವಕ ಶುಭಾಶಯಗಳು ಎಂದಿದ್ದಾರೆ.

Exit mobile version