ಸೋಮವಾರವನ್ನು ವಾರದ ಅತ್ಯಂತ ಕೆಟ್ಟ ದಿನ ಎಂದು ಘೋಷಿಸಿದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್!

Weird : ಅತ್ಯಂತ ವಿಚಿತ್ರ ಎನಿಸುವ ಮಾನವ ಸಾಧನೆಗಳು, ನೈಸರ್ಗಿಕ ಪ್ರಪಂಚದ ವೈಪರಿತ್ಯಗಳು ಹಾಗೂ ವಿಶ್ವ ದಾಖಲೆಗಳನ್ನು ಪಟ್ಟಿ ಮಾಡುವ ದಾಖಲೆ ಪುಸ್ತಕವನ್ನು ಗಿನ್ನೆಸ್ ಬುಕ್ (Guiness World Records) ಎಂದು ಕರೆಯಲಾಗುತ್ತದೆ. ಇದನ್ನು ವಾರ್ಷಿಕವಾಗಿ ಪ್ರಕಟಿಸಲಾಗುತ್ತದೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇದುವರೆಗೆ 143 ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡಿದ್ದು, ಈಗ ಜಾಗತಿಕ ಬ್ರ್ಯಾಂಡ್ ಆಗಿದೆ.

ಲಂಡನ್, ನ್ಯೂಯಾರ್ಕ್, ಬೀಜಿಂಗ್, ಟೋಕಿಯೊ ಮತ್ತು ದುಬೈನಲ್ಲಿ ಇದರ ಕಚೇರಿಗಳಿವೆ ಹಾಗೂ ಗಿನ್ನೆಸ್ ತೀರ್ಪುಗಾರರು ಪ್ರಪಂಚದಾದ್ಯಂತ ನೆಲೆಸಿದ್ದಾರೆ.

ಇದೀಗ ವಾರದಲ್ಲೇ ಸೋಮವಾರ ಅತ್ಯಂತ ಕೆಟ್ಟ ದಿನ ಎಂದು ಗಿನ್ನೆಸ್ ವಿಶ್ವ ದಾಖಲೆ ಘೋಷಣೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳಿಂದ ಹಿಡಿದು ಕೆಲಸಕ್ಕೆ ಹಾಜರಾಗುವ ಉದ್ಯೋಗಿಗಳಿಗೆ ವಾರದ ಏಳು ದಿನಗಳಲ್ಲಿ ನಿಮಗೆ ಯಾವ ದಿನ ಇಷ್ಟ ಎಂದು ಕೇಳಿದರೆ, ಹೆಚ್ಚಿನವರ ಉತ್ತರ ಭಾನುವಾರ ಎನ್ನುವುದು.

ಇದನ್ನೂ ಓದಿ : https://vijayatimes.com/rohit-chakratheertha-likes-kantara/

ಕಾರಣ ಇದು ವೀಕೆಂಡ್ ಹಾಗೂ ರಜಾ ದಿನ. ಇನ್ನೂ ಕೆಲವರಿಗೆ ಶನಿವಾರ ಹಾಗೂ ಭಾನುವಾರ ರಜೆ ಇರುವ ಕಾರಣ, ಎರಡೂ ದಿನಗಳನ್ನು ಇಷ್ಟಪಡುತ್ತಾರೆ.

ಇನ್ನು, ಸೋಮವಾರದ ವಿಚಾರವಂತೂ ಹೇಳುವುದೇ ಬೇಡ. ವೀಕೆಂಡ್ ಮೂಡ್‌ನಿಂದ ಮತ್ತೆ ಕೆಲಸಕ್ಕೆ ಹಾಜರಾಗಲು, ಉತ್ಸಾಹದಿಂದ ಕೆಲಸ ಮಾಡಲು ಅಥವಾ ಶಾಲೆಯಲ್ಲಿ ಪಾಠ ಕೇಳಲು ಕಷ್ಟ.

ಹೀಗಾಗಿ ಸೋಮವಾರ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ, ಇದೀಗ ವಾರದಲ್ಲಿ ಸೋಮವಾರವೇ ಅತ್ಯಂತ ಕೆಟ್ಟ ದಿನ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧಿಕೃತವಾಗಿ ಘೋಷಿಸಿದೆ.

ಇನ್ನು ಮುಂದೆ ಸೋಮವಾರ ಎನ್ನುವುದು ಅಧಿಕೃತವಾಗಿ ಕೆಟ್ಟ ದಿನವಾಗಿ ಗುರುತಿಸಲ್ಪಡುತ್ತದೆ!


ಸಾಮಾನ್ಯವಾಗಿ, ವೀಕೆಂಡ್ ಬಳಿಕ ಹೆಚ್ಚಿನವರು ಸೋಮವಾರ ಕೆಲಸಕ್ಕೆ ಹಾಜರಾಗುವುದೇ ಇಲ್ಲ. ಹಾಜರಾದವರೂ ನಿಧಾನವಾಗಿ ಕೆಲಸ ಮಾಡುತ್ತಾರೆ, ಕೆಲವರಿಗಂತೂ ಆಸಕ್ತಿಯೇ ಇರುವುದಿಲ್ಲ. ಹೀಗಾಗಿ ಕಳೆದ ಕೆಲ ದಿನಗಳಿಂದ ಸೋಮವಾರದ ಕುರಿತು ಭಾರಿ ಚರ್ಚೆಗಳು ನಡೆದಿದ್ದವು.

ಹಲವರು ಸೋಮವಾರವನ್ನು ‘ಉಫ್’ ದಿನವಾಗಿ ಹೆಸರಿಸಲು ಸೂಚಿಸಿದ್ದರು. ಕಾರಣ, ಈ ದಿನ ಕೆಲಸ ಮಾಡುವವರು ಉಸ್ಸಾಪ್ಪ ಅಂತಾರೆ. ಯಾಕಪ್ಪ ಈ ಕೆಲಸ ಬೇಕು ಎಂದು ಎಲ್ಲರನ್ನು ಬೈದುಕೊಳ್ಳುತ್ತಾ ಕೆಲಸ ಮಾಡುತ್ತಾರೆ.

ಹೀಗಾಗಿ ‘ಉಫ್’ ದಿನವಾಗಿ ಹೆಸರಿಡಿ ಎಂದು ಸೂಚಿಸಿದ್ದರು. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಸೋಮವಾರವನ್ನು ವೀಕೆಂಡ್ ದಿನಕ್ಕೆ ಸೇರಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

https://youtu.be/hU974etRC3E ಮಳೆ ಅವಾಂತರ !

“ಶನಿವಾರ, ಭಾನುವಾರ ಹಾಗೂ ಸೋಮವಾರನ್ನು ವೀಕೆಂಡ್ ದಿನವನ್ನಾಗಿ ಮಾಡಿ. ಇದರಿಂದ ಎಲ್ಲರೂ ಸೋಮವಾರವನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ” ಎಂದು ಸೂಚಿಸಿದ್ದರು.

ಆದರೆ, ಹೀಗೆ ಮಾಡುತ್ತಾ ಹೋದರೆ ವಾರದ ಎಲ್ಲಾ ದಿನಗಳು ವೀಕೆಂಡ್ ಆಗಲಿವೆ. ಹೀಗಾಗಿ ಇದು ಬೇಡ, ಇದರ ಬದಲಿಗೆ ಸೋಮವಾರವನ್ನು ಅರ್ಧ ದಿನವನ್ನಾಗಿ ಮಾಡಿ ಎಂದು ಹಲವರು ಸೂಚಿಸಿದ್ದರು.


ಹೀಗೆ, ಎಲ್ಲಾ ಚರ್ಚೆಗಳ ಬಳಿಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇದೀಗ ಸೋಮವಾರವನ್ನು ವಾರದ ಅತ್ಯಂತ ಕೆಟ್ಟದಿನ ಎಂದು ಘೋಷಿಸಿದೆ.

ಟ್ವಿಟರ್ ಮೂಲಕ ಸೋಮವಾರ ವಾರದ ಕೆಟ್ಟ ದಿನ ಎಂದು ಗಿನ್ನೆಸ್ ವಿಶ್ವ ದಾಖಲೆ ಸಮಿತಿ ಅಧಿಕೃತವಾಗಿ ಘೋಷಿಸಿದೆ. ಇದಕ್ಕೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಸೋಮವಾರವನ್ನು ಕೆಟ್ಟ ದಿನ ಎಂದು ಘೋಷಿಸುವ ಮೂಲಕ ಯಾರೆಲ್ಲಾ ಇದೇ ದಿನ ತಮ್ಮ ಕನಸು ನನಸು ಮಾಡಲು ಕಾಯುತ್ತಿರುತ್ತಾರೋ ಅವರಿಗೆ ಅವಮಾನ ಮಾಡಿದೆ ಎಂದೂ ಕೆಲವರು ಆರೋಪಿಸಿದ್ದಾರೆ.

ಹೀಗೆ, ಆರೋಪ ಪ್ರತ್ಯಾರೋಪ, ಟೀಕೆಯ ನಡುವೆ ಇದೀಗ ಸೋಮವಾರ ವಾರದ ಅತ್ಯಂತ ಕೆಟ್ಟದಿನವಾಗಿದೆ.

ಈಗಾಗಲೇ, ಅನೇಕ ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳು ತಮ್ಮ ಉದ್ಯೋಗಿಗಳ ‘ಮಂಡೆ ಬ್ಲೂಸ್’ ಅನ್ನು ತೆಗೆದುಹಾಕಲು ಸ್ಫೂರ್ತಿದಾಯಕ ಪೋಸ್ಟ್ ಗಳನ್ನು ಮಾಡುತ್ತಲೇ ಇರುತ್ತಾರೆ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ(Anand Mahindra) ಕೂಡ ತಮ್ಮ ಅನುಯಾಯಿಗಳಿಗೆ ಜೀವನದ ಗುರಿಗಳ ಬಗ್ಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/goat-swallowed-by-python/


ಇದೆಲ್ಲಾ ಏನೇ ಇರಲಿ, ಮಾನವನ ಆಸೆ, ಆಕಾಂಕ್ಷೆ, ಆಲಸ್ಯಕ್ಕೆ, ಬಡಪಾಯಿ ಸೋಮವಾರದ ಮೇಲೆ ಆರೋಪ ಹೊರಿಸಲಾಗಿದೆ. ನಿಮ್ಮ ಆಲಸ್ಯಕ್ಕೆ ಸೋಮವಾರವನ್ನು ಯಾಕೆ ಬಲಿಕೊಟ್ಟಿದ್ದೀರಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version