ಧೋನಿ ಅವರನ್ನು ಟಿ20 ವಿಶ್ವಕಪ್‌ಗೆ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ – ಕಪಿಲ್ ದೇವ್

ಕೋಲ್ಕತ್ತಾ ಸೆ 11 :  ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಟಿ20 ವಿಶ್ವಕಪ್‌ಗೆ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಧೋನಿ ಅವರನ್ನು ಟ20 ವಿಶ್ವಕಪ್‌ಗೆ ಮೆಂಟರ್ ಆಗಿ ಭಾರತ ತಂಡಕ್ಕೆ ಆರಿಸಿರುವುದು ಒಳ್ಳೆಯ ನಿರ್ಧಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕ್ರಿಕೆಟರ್ ಕನಿಷ್ಠ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಕೋಚಿಂಗ್ ವಿಭಾಗಕ್ಕೆ ಬರಬೇಕೆಂದು ನಾನು ಹೇಳುತ್ತಿರುತ್ತೇನೆ. ಆದರೆ ಧೋನಿ ವಿಚಾರದಲ್ಲಿ ಇದು ವಿಶೇಷ ಪ್ರಕರಣವಾಗಿದೆ. ವಿಶ್ವಕಪ್‌ ಸಮೀಪದಲ್ಲಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ ಈಗಾಗಲೇ ಭಾರತದ ತಂಡದ ಕೋಚ್ ರವಿ ಶಾಸ್ತ್ರಿ ಕೂಡ ಕೋವಿಡ್‌ ಸೋಂಕಿಗೆ ತುತ್ತಾಗಿರುವುದರಿಂದ ವಿಶ್ವಕಪ್‌ಗೆ ಧೋನಿ ಅವರನ್ನು ಮೆಂಟರ್ ಆಗಿ ನೇಮಿಸಿರುವುದು ತಂಡದ ಹಿತದೃಷ್ಠಿಯಿಂದ ಒಳ್ಳೆಯ ವಿಚಾರವಾಗಿದೆ ಎಂದು ಅವರು ತಿಳಿಸಿದರು.

ಬಿಸಿಸಿಐ ಇತ್ತೀಚೆಗೆ ಮುಂಬರಲಿರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟಿಸಿತ್ತು. ಇದೇ ವೇಳೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ  ಅವರು ಮೆಂಟರ್ ಆಗಿ ತಂಡದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಕಳೆದ ವರ್ಷ 2020ರಲ್ಲಿ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಟಿ 20 ವಿಶ್ವಕಪ್‌ ಪಂದ್ಯಾವಳಿಯು ಅಕ್ಟೋಬರ್‌ 17ರಂದು ಓಮನ್ ಮತ್ತು ಪಪುವಾ ನ್ಯೂಗಿನಿಯಾ ದೇಶಗಳ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ. ನವೆಂಬರ್‌ 14ರಂದು ಕೊನೆಗೊಳ್ಳಲಿದೆ.

Exit mobile version