ಕಲಬುರಗಿಯಲ್ಲಿ ಬೃಹತ್‌ ಜವಳಿ ಪಾರ್ಕ್ ನಿರ್ಮಾಣ – ಮುರುಗೇಶ್ ನಿರಾಣಿ

ಕಲಬುರಗಿ ಜ 4 : ಉತ್ತರ ಕರ್ನಾಟಕವನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದು, ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರ ಕಲಬುರಗಿಯಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಕಾರಣಕ್ಕಾಗಿ  ಈ ಭಾಗದಲ್ಲಿ ಜವಳಿ ಪಾಕ್೯ (ಟೆಕ್ಸ್ ಟೈಲ್) ಪ್ರಾರಂಭಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಘೋಷಿಸಿದರು.

ಸೋಮವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ನಡೆದ ಉದ್ಯಮಿಯಾಗು ,ಉದ್ಯೋಗ ನೀಡು ಹಾಗೂ ಕೈಗಾರಿಕಾ ಆದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂಬಂಧ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆಯನ್ನು ನಡೆಸಲಾಗಿದ್ದು, ಕೇಂದ್ರದಿಂದ ನಮಗೆ ಸಕಾರಾತ್ಮಕ ಸ್ಪಂಧಿಸಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಬೀದರ್ ಸೇರಿದಂತೆ ಈ ಸುತ್ತಮುತ್ತಲ  ಜಿಲ್ಲೆಗಳಲ್ಲಿ ಹತ್ತಿಯನ್ನು ಯಥೇಚ್ಚವಾಗಿ ಬೆಳೆಯುತ್ತಾರೆ. ಇಲ್ಲಿ ಜವಳಿ ಪಾರ್ಕ್ ಪ್ರಾರಂಭವಾದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಜವಳಿ ಪಾರ್ಕ್ ಪ್ರಾರಂಭಿಸಲು ಬರುವವರಿಗೆ  ಸರ್ಕಾರ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ. ಅವರಿಗೆ ಪವನ ಹಾಗೂ , ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವವರಿಂದ  ರಿಯಾಯ್ತಿ ದರದಲ್ಲಿ ವಿದ್ಯುತ್ ನೀಡುವುದು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದಲೇ ತರಬೇತಿ ನೀಡಿ ನುರಿತ ಕೌಶಲ್ಯ ಕಾರ್ಮಿಕರನ್ನು ಒದಗಿಸಲಿದ್ದೇವೆ ಎಂದು ಆಶ್ವಾಸನೆ ನೀಡಿದರು.

ಜವಳಿ ಪಾರ್ಕ್ ಆರಂಭವಾದರೆ  ಹತ್ತಿ ನೂಲುವುದು, ಬೀಜ ತೆಗೆಯುವುದು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲು ಸಹಾಯವಾಗುತ್ತದೆ. ಟೆಕ್ಸ್ ಟೈಲ್ ಪಾರ್ಕ್  ಆರಂಭಿಸಲು ಮುಂದೆ ಬರುವ ಉದ್ಯಮಿಗಳಿಗೆ ಸರ್ಕಾರ ಅನೇಕ ರೀತಿಯ ನೆರವುಗಳನ್ನು ನೀಡಲಿದೆ ಎಂದು ಭರವಸೆ ಕೊಟ್ಟರು.

 ಈ ಭಾಗವನ್ನು ಟೆಕ್ಸ್ ಟೈಲ್ ಹಬ್ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಬರುವ  ಉದ್ಯಮಿಗಳಿಗೆ ಅಗತ್ಯವಾದ ನೀರು, ರಸ್ತೆ, ವಿದ್ಯುತ್, ಭೂಮಿ ಎಲ್ಲವನ್ನು ಕಾಲಮಿತಿಯೊಳಗೆ ನೀಡಲಿದೆ. ಉದ್ಯಮಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು  ಅವರು ಮನವಿ ಮಾಡಿದರು.

Exit mobile version