Bengaluru: ದೇಶದ ಸ್ವಚ್ಚ ನಗರಗಳ ಸ್ಥಿತಿಗತಿಯನ್ನು ತಿಳಿಸುವ ಸ್ವಚ್ಛ ನಗರ ಸರ್ವೇಕ್ಷಣೆ ವರದಿ ಪ್ರಕಟಗೊಂಡಿದ್ದು, ಅರಮನೆ ನಗರಿ ಮೈಸೂರಿಗೆ (Mysore) ಭಾರೀ ಹಿನ್ನಡೆಯಾಗಿದೆ. ಸ್ವಚ್ಛ ನಗರ ಸರ್ವೇಕ್ಷಣೆ ಪಟ್ಟಿಯಲ್ಲಿ ಮೈಸೂರಿಗೆ 27ನೇ ಸ್ಥಾನ ಸಿಕ್ಕಿದೆ. ಇದೀಗ ಮೈಸೂರು ನಗರ ಈಗ ಸ್ವಚ್ಛತೆಯಲ್ಲಿ ಕೊರತೆ ಅನುಭವಿಸುತ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಈವರೆಗೂ ಟಾಪ್ 10ರಲ್ಲಿ ಸ್ಥಾನ ಪಡೆಯುತ್ತಿದ್ದ ಮೈಸೂರು ನಗರ ಈ ಬಾರಿ 27ನೇ ಸ್ಥಾನಕ್ಕೆ ಕುಸಿದಿದೆ.
2022ರಲ್ಲಿ 7ನೇ ಸ್ಥಾನವನ್ನು ಮೈಸೂರು ನಗರ ಪಡೆದುಕೊಂಡಿತ್ತು. ಇನ್ನು 3 ರಿಂದ 10 ಲಕ್ಷ ಜನ ಸಂಖ್ಯೆಯ ವಿಭಾಗದಲ್ಲಿ 2022ರಲ್ಲಿ 1ನೇ ಸ್ಥಾನ ಪಡೆದುಕೊಂಡಿದ್ದ ಮೈಸೂರು ನಗರ ಈ ಬಾರಿ 2ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಏಪ್ರಿಲ್ (April) ತಿಂಗಳಲ್ಲಿ ಮೈಸೂರಿಗೆ ಬಂದಿದ್ದ ಕೇಂದ್ರದ ಸ್ವಚ್ಛ ಸರ್ವೇಕ್ಷಣ ತಂಡ ನಗರದ ಸ್ವಚ್ಛತೆ ವ್ಯವಸ್ಥೆಯ ಪರಿಶೀಲನೆ ನಡೆಸಿತ್ತು.
ನಾಗರಿಕರು ನೀಡಿರುವ ಅಭಿಪ್ರಾಯ ಮತ್ತು ಸೀವೇಜ್ ಫಾರಂ (Sewage Form)ನಲ್ಲಿ ಕಸದ ರಾಶಿಯ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರ ಸಹಭಾಗಿತ್ವದ ಕೊರತೆಯಿಂದಾಗಿ ಸ್ವಚ್ಛತಾ ಪಟ್ಟಿಯಲ್ಲಿ ಅರಮನೆ ನಗರಿ ಮೈಸೂರು ಹಿಂದುಳಿದಿದೆ. ಮೈಸೂರು ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು ಆರಂಭದಲ್ಲಿ ತೋರಿದ್ದ ಭಾರೀ ಉತ್ಸಾಹ ನಂತರದ ವರ್ಷಗಳಲ್ಲಿ ಕಡಿಮೆಯಾಗಿದೆ. ಹೀಗಾಗಿಯೇ ಮೈಸೂರು ಇಂದು ತನ್ನ ಹಿರಿಮೆಯನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಂಗಳೂರಿಗೆ 125ನೇ ಸ್ಥಾನ :
ಸ್ವಚ್ಛ ಸರ್ವೇಕ್ಷಣಾ 2023 ಪಟ್ಟಿಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 446 ನಗರಗಳ ಪೈಕಿ ರಾಜಧಾನಿ ಬೆಂಗಳೂರು (Bengaluru) 125ನೇ ಸ್ಥಾನ ಪಡೆದುಕೊಂಡಿದೆ. ಮಧ್ಯಪ್ರದೇಶದ ಇಂದೋರ್ ಸತತ 7ನೇ ಬಾರಿಗೆ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್ನ ಸೂರತ್ ಕೂಡ ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ಭಾಜನವಾಗಿದೆ. ನವೀ ಮುಂಬೈ ದೇಶದ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾರಾಷ್ಟ್ರ (Maharashtra)ವು ಸ್ವಚ್ಛ ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.