ಕಳಪೆ ಕಾಮಗಾರಿಯಿಂದ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ ಮೈಸೂರು ಮಂದಿ

Deadly road kills citizen everyday in Mysore |ಕಳಪೆ ಕಾಮಗಾರಿಯಿಂದ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ ಮೈಸೂರು

ಮೈಸೂರು ಜಿಲ್ಲೆಯ ಮಹಾನಗರ ಪಾಲಿಕೆ ವಾರ್ಡ್ ನಂ 37 ರ ಕಾವೇರಿ ಮುಖ್ಯ ರಸ್ತೆಯ ರಾಘವೇಂದ್ರ ನಗರದ ರಸ್ತೆಯ  ಕಳಪೆ ಕಾಮಗಾರಿಯಿಂದ ಬಡ ಜೀವಗಳು ಪ್ರಾಣ ಕಳೆದುಕೊಳ್ಳುತ್ತಿವೆ.  ಇದು  ವಿಶ್ವ ವಿಖ್ಯಾತಿ ಜಿಲ್ಲೆಯಾದ ಮೈಸೂರಿನ ಮಹಾನಗರ ಪಾಲಿಕೆಯ ಕಾವೇರಿ ಮುಖ್ಯ ರಸ್ತೆ.   ಇಲ್ಲಿನ  ರಸ್ತೆಯ ಗುಂಡಿಗಳಿಗೆ ಬಿದ್ದು ಸಾರ್ವಜನಿಕರು  ನಿತ್ಯ ಸಂಕಷ್ಟಗಳನ್ನು ಅನುಭವಿಸುವಂತಾಗಿದೆ.

2016-2017 ನೇ ಸಾಲಿನಲ್ಲಿ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ 1 ಕೋಟಿ 30 ಲಕ್ಷ  ಅನುದಾನದಲ್ಲಿ ರಸ್ತೆ ಮಾಡುವ ನೆಪದಲ್ಲಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ. ಇವರು  ಮಾಡಿದ ಕೆಲಸ ತೀರಾ ಕಳಪೆ ಮಟ್ಟದ್ದಾಗಿದ್ದು ಕೇವಲ 15 ತಿಂಗಳಲ್ಲಿ ಸಂಫೂರ್ಣವಾಗಿ ಹಾಳಾಗಿದೆ. ಈ ಕಾಮಗಾರಿಯಿಂದ ಸಾರ್ವಜನಿಕರಿಗೆ ,ವ್ಯಾಪಾರಸ್ಥರಿಗೆ,ಮಕ್ಕಳಿಗೆ, ವಯೋವೃದ್ಧರಿಗೆ ಪಾದಾಚಾರಿಗಳಿಗೆ ನಿತ್ಯ ದೂಳು ಕುಡಿದು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ.

ಇನ್ನು ಈ ರಸ್ತೆಯಲ್ಲಿ ಓಡಾಡೋ ವಾಹನ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ.  ಶಾಲಾ ಮಕ್ಕಳು ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ.  ರಸ್ತೆ ತುಂಬಾ ಅಡ್ಡಾ ದಿಡ್ಡಿಯಾಗಿ ಕಲ್ಲು ಮಣ್ಣು ಗಳನ್ನು ಚೆಲ್ಲಾಡಿ ವಾಹನ ಸವಾರರಿಗೆ ತೊಂದರೆಗಳಾಗಿ ಎಷ್ಟೋ ಆಕ್ಸಿಡೆಂಟ್‌ಗಳಾಗಿ ಬಡ ಜೀವಿಗಳು ಸಂಕಷ್ಟಕ್ಕೆ ತುತ್ತಾಗಿವೆ. ಈ ರಸ್ತೆಗಳು  ಅಲ್ಲಲ್ಲಿ  ಕಿತ್ತೋಗಿ  ಹಳ್ಳ ಕೊಳ್ಳಗಳಾಗಿ  ಅನೇಕ ಜನರು ಇಲ್ಲಿ ಬಿದ್ದು ಗಾಯಗೊಂಡು ಪ್ರಾಣ ಕಳೆದುಕೊಂಡರೂ ಇದರ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಹಾಗೂ  ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಯಾರೂ ಇದರತ್ತ ಗಮನ ಹರಿಸಿಲ್ಲವೆಂಬುದು ಜನರ ದೂರು.

ಇಲ್ಲಿ  ಮೊನ್ನೆ ಮೊನ್ನೆ ಒಬ್ಬ ಇನ್ನೂ ಬಾಳಿ ಬದುಕಬೇಕಾದ ಯುವಕ ಆಕ್ಸಿಡೆಂಟ್ ಗೆ ಬಲಿಯಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇದಕ್ಕೆಲ್ಲಾ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆ. ಸರಕಾರಕ್ಕೆ ನಾವು ಮನೆ ಕಂದಾಯ, ನೀರಿನ ಬಿಲ್ಲು, ಕರೆಂಟ್ ಬಿಲ್ಲ್, ವಾಹನಗಳ ಇನ್ಸೂರೆನ್ಸ್ ಹಾಗೂ ದಿನ ಬಳಕೆಯ ಸಾಮಾನು ಖರೀದಿಯಲ್ಲೂ ಜಿ ಎಸ್ ಟಿ ಕಟ್ಟಿ ಸರ್ಕಾರದ ಆದೇಶಕ್ಕೆ ತಲೆಬಾಗಿ ನ್ಯಾಯಯುತವಾಗಿದ್ದರೂ ಸರಕಾರ ಜನರಿಗೇಕೆ ಈ ರೀತಿಯ ಮೋಸ ಮಾಡುತ್ತಿದೆ ಎಂಬುದು ಇಲ್ಲಿನ ಜನರ ಪ್ರಶ್ನೆ.

ಹೆಲ್ಮೆಟ್ ಹಾಕದಿದ್ರೆ ಫೈನ್ ಹಾಕ್ತೀರಾ, ವಾಹನಗಳ ಇನ್ಸೂರೆನ್ಸ್ ಕಟ್ಟದಿದ್ದರೆ ಫೈನ್ ಹಾಕ್ತೀರಾ , ಮಾಸ್ಕ್ ಹಾಕಿಲ್ಲಾಂದ್ರೆ ಫೈನ್ ಹಾಕ್ತೀರಾ, ಕರೆಂಟ್ ಬಿಲ್ ಕಟ್ಟಿಲ್ಲಾಂದ್ರೆ ಫೈನ್ ಹಾಕ್ತೀರಾ ನೀರು ಬಿಲ್ಲ್ ಕಟ್ಟಿಲ್ಲಾಂದ್ರೂ  ಫೈನ್ ಹಾಕ್ತೀರಾ, ಆದ್ರೆ ಸಾರ್ವಜನಿಕರಿಗೆ ಇಷ್ಟೆಲ್ಲಾ ಶಿಕ್ಷೆ ಕೊಡುವ ಕಾನೂನು,, ಅಭಿವೃದ್ಧಿ ಹೆಸರಿನಲ್ಲಿ 1 ಕೋಟಿ 30 ಲಕ್ಷ ಹಣವನ್ನು ರಸ್ತೆ ಕಾಮಗಾರಿಯ ಹೆಸರಲ್ಲಿ ನುಂಗಿ ನೀರು ಕುಡಿದ ಭ್ರಷ್ಟ ಗುತ್ತಿಗೆದಾರರಿಗೆ ಹಾಗೂ ಅದಕ್ಕೆ ಸಂಬಂದಿಸಿದ ಅಧಿಕಾರಿಗಳಿಗೆ ಯಾವ ಶಿಕ್ಷೆ ವಿಧಿಸುತ್ತೀರಿ ಎಂಬುದು ಜನರ ನೇರ ಪ್ರಶ್ನೆ. ಇಂತಹ ಭ್ರಷ್ಟ ಅಧಿಕಾರಿ ಹಾಗೂ ಗುತ್ತಿಗೆದಾರರ ಪರವಾನಿಗೆ ರದ್ದುಗೊಳಿಸಿ ಸರಿಯಾದ ಶಿಕ್ಷೆ ವಿಧಿಸಿ.  ಅವರಿಂದಲೇ ಈ ಕಾಮಗಾರಿಯನ್ನು ಪುನರ್ನಿರ್ಮಾಣ ಮಾಡಿ ಅವರಿಂದಲೇ ಸಂಪೂರ್ಣ ವೆಚ್ಚವನ್ನು ಭರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ನೋಡಿದಿರಲ್ಲಾ ಮೈಸೂರಿನ ಮಹಾ ನಗರಪಾಲಿಕೆ ಮುಖ್ಯ ರಸ್ತೆಯ ದುಸ್ಥಿತಿಯಿಂದ ಜನರಿಗಾಗುತ್ತಿರುವ ಅನ್ಯಾಯ ಹಾಗೂ ಸಂಕಷ್ಟಗಳನ್ನು ಸೊ ಆದಷ್ಟು ಬೇಗ ಅಲ್ಲಿನ ಅಧಿಕಾರಿಗಳು ಎಚ್ಚೆತ್ತು ಜನರ ಕಷ್ಟಗಳಿಗೆ ಸ್ಪಂದಿಸಲಿ ಎಂಬುದೇ ವಿಜಯಾ ಟೈಮ್ಸ್ ಆಶಯವಾಗಿದೆ.

Exit mobile version