ನಾಲ್ಕನೇ ಟೆಸ್ಟ್: ಆಸೀಸ್ 2ನೇ ಇನ್ನಿಂಗ್ಸ್ 294ಕ್ಕೆ ಆಲೌಟ್: ಭಾರತಕ್ಕೆ 328 ರನ್‌ ಟಾರ್ಗೆಟ್

ಬ್ರಿಸ್ಬೇನ್, ಜ. 19: ಪ್ರವಾಸಿ ಭಾರತ ಹಾಗೂ ಅತಿಥೇಯ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ನಿರ್ಣಾಯಕ ಘಟ್ಟ ತಲುಪಿದ್ದು, ಪಂದ್ಯ ಗೆಲ್ಲಲು ಟೀಂ ಇಂಡಿಯಾ 328 ರನ್‌ಗಳ ಗುರಿ ಮುಟ್ಟಬೇಕಿದೆ.

ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಆಟ ಮುಂದುವರಿಸಿದ ಆಸೀಸ್, ವೇಗಿಗಳಾದ ಮೊಹಮ್ಮದ್ ಸಿರಾಜ್(73ಕ್ಕೆ 5) ಮತ್ತು ಶಾರ್ದೂಲ್ ಠಾಕೂರ್(61ಕ್ಕೆ 4) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪರಿಣಾಮ 2ನೇ ಇನ್ನಿಂಗ್ಸ್ ನಲ್ಲಿ 294 ರನ್‌ಗಳಿಗೆ ಆಲೌಟ್ ಆಯಿತು.

ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ದೊರೆತ 33 ರನ್‌ಗಳ ಭಾರತಕ್ಕೆ 328 ರನ್‌ಗಳ ಗುರಿ ನೀಡಿದೆ. ಆಸ್ಟ್ರೇಲಿಯಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಹ್ಯಾರಿಸ್ 38, ಡೇವಿಡ್ ವಾರ್ನರ್ 48, ಲ್ಯಾಬುಸ್ಚಾಗ್ನೆ 25, ಸ್ಟೀವ್ ಸ್ಮಿತ್ 55, ಕ್ಯಾಮರೂನ್ ಗ್ರೀನ್ 37, ಟೀಮ್ ಪೈನ್ 27, ಪ್ಯಾಟ್ ಕಮ್ಮಿನ್ಸ್ ಅಜೇಯ 28 ರನ್ ಗಳಿಸಿದರು.

ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ 4 ರನ್‌ಗಳಿಸಿದ್ದ ವೇಳೆ ಸುರಿದ ಮಳೆಯಿಂದಾಗಿ ನಾಲ್ಕನೇ ದಿನದಾಟವನ್ನು ಇನ್ನೂ 22 ಓವರ್‌ಗಳ ಆಟ ಬಾಕಿಯಿರುವಾಗಲೇ ಮೊಟಕುಗೊಳಿಸಲಾಯಿತು. ಹೀಗಾಗಿ ಪಂದ್ಯದ ಕೊನೆಯ ದಿನದಾಟ ಕುತೂಹಲ ಮೂಡಿಸಿದ್ದು, ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲು 324 ರನ್‌ಗಳಿಸಬೇಕಿದೆ.

Exit mobile version