ಮೈಸೂರು, ಜ. 15: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫಾರ್ಮ್ ಹೌಸ್‌ನಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ ಜೋರಾಗಿತ್ತು.
ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ದಿನದಂದು ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳನ್ನು ಸಿಂಗಾರಗೊಳಿಸಿ ವಿಶೇಷ ಪೂಜೆ ಸಲ್ಲಿಸುವ ಜತೆಗೆ ಸಂಜೆ ವೇಳೆ ಕಿಚ್ಚು(ಬೆಂಕಿ) ಹಾಯಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಫಾರ್ಮ್ ಹೌಸ್‌ನಲ್ಲಿ ಸಹ ಜಾನುವಾರುಗಳ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಂಕ್ರಾಂತಿ ಹಿನ್ನೆಲೆಯಲ್ಲಿ ಮೈಸೂರಿನ ತಿ.ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರ್ಮ್ ಹೌಸ್‌ಗೆ ತೆರಳಿದ ನಟ ದರ್ಶನ್, ತಮ್ಮ ಸ್ನೇಹಿತರು ಹಾಗೂ ಆಪ್ತರೊಂದಿಗೆ ಬೆರೆತು ಫಾರ್ಮ್ ಹೌಸ್‌ನಲ್ಲಿ ಸಾಕಿರುವ ಹಸುಗಳು ಹಾಗೂ ತಮ್ಮ ನೆಚ್ಚಿನ ಕುದುರೆಯನ್ನು ಕಿಚ್ಚು ಹಾಯಿಸುವ ಮೂಲಕ ಹಬ್ಬದ ಸಂಭ್ರಮ ಸವಿದರು.