‘ಅಕ್ಷಿ’ಯಲ್ಲಿದೆ ಎಸ್ ಪಿ ಬಾಲು ಹಾಡು

ಬೆಂಗಳೂರು ಸೆ 20 : ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರವಾದ ‘ಅಕ್ಷಿ’ಯ ಹಾಡುಗಳ ಬಿಡುಗಡೆ ಇತ್ತೀಚೆಗೆ ನೆರವೇರಿತು. ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಜೀವಿತಾವಧಿಯ ಕೊನೆಯಲ್ಲಿ ಹಾಡಿದ ಒಂದು ಹಾಡು ಇದರಲ್ಲಿರುವುದು ವಿಶೇಷ.

ನಟಿ ಸ್ಪರ್ಶ ರೇಖಾ, ನಟ ವಿಜಯಸೂರ್ಯ, ಮಿಂಟೋ ಹಾಸ್ಪಿಟಲ್ ನಿರ್ದೇಶಕರಾದ ಡಾ.ಸುಜಾತ ರಾಥೋಡ್ ಹಾಗೂ ಉದ್ಯಮಿ ಗುಪ್ತ ಅವರು “ಅಕ್ಷಿ” ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಭಾವ ಚಿತ್ರಕ್ಕೆ  ಪುಷ್ಪನಮನ ಸಲ್ಲಿಸುವುದರೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮದಲ್ಲಿ  ಅವರು ಹಾಡಿರುವ ಹಾಡನ್ನು ಹಾಗೂ ಅವರು ಹಾಡಿನ ಬಗ್ಗೆ ಮಾತನಾಡಿದ ಫೋನ್ ಸಂಭಾಷಣೆಯನ್ನು ಕೇಳಿಸಲಾಯಿತು. ಗಾನಕೋಗಿಲೆ ಎಸ್. ಜಾನಕಿಯವರು ಕೂಡ ಚಿತ್ರದ ಹಾಡುಗಳನ್ನು ‌ಮೆಚ್ಚಿ ಮಾತನಾಡಿರುವ ಆಡಿಯೋ ಕೇಳಿಸಲಾಯಿತು.

ಚಿತ್ರದ ಸಂಗೀತ ನಿರ್ದೇಶನದಿಂದ ಹಿಡಿದು, ಗೀತ ರಚನೆ ಮಾಡಿ, ಚಿತ್ರವನ್ನು ನಿರ್ಮಿಸಿ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿರುವ ನಟ ಕಲಾದೇಗುಲ ಶ್ರೀನಿವಾಸ್ ಅವರು ಹಾಡು ಮೂಡಿಬಂದ ಬಗ್ಗೆ ಭಾವನಾತ್ಮಕವಾಗಿ ವಿವರಿಸಿದರು. ಇಂಥದೊಂದು ಕಥೆ ಆಯ್ಕೆ ಮಾಡಿಕೊಂಡಿದಕ್ಕಾಗಿ‌ ನಿರ್ದೇಶಕರಿಗೆ ಹ್ಯಾಟ್ಸ್ ಆಫ್. ನಾನು ಚಿತ್ರ ನೋಡಲು ಕಾತರಳಾಗಿದ್ದೇನೆ. ನೇತ್ರದಾನ ಮಹಾದಾನ ಎಂಬ ಹಾಡುಗಳು ಚೆನ್ನಾಗಿವೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ನಟಿ ಸ್ಪರ್ಶ ರೇಖಾ.

ಎಲ್ಲರೂ ಒಳ್ಳೆಯ ಸಂದೇಶವಿರುವ ಸಿನಿಮಾ ಮಾಡಬೇಕೆಂದುಕೊಳ್ಳುತ್ತರೆ. ಆದರೆ ಕಾರ್ಯರೂಪಕ್ಕೆ ತರುವುದು ವಿರಳ. ಏಕೆಂದರೆ ಕಮರ್ಷಿಯಲ್ ಸಿನಿಮಾಗಳ‌ ಮೇಲೆ ಎಲ್ಲರ ಒಲವು. ಇಂತಹ ಒಳ್ಳೆಯ ಕಥೆ ಆಧಾರಿತ ಚಿತ್ರ ತೆರಗೆ ತರುತ್ತಿರುವ ನಿರ್ದೇಶಕ ಮನೋಜ್ ಕುಮಾರ್ ತಂಡಕ್ಕೆ ಶುಭವಾಗಲಿ ಎಂದರು ನಟ ವಿಜಯ ಸೂರ್ಯ. ಒಬ್ಬ‌ ವ್ಯಕ್ತಿ ಸತ್ತ ಮೇಲೂ ಅವನ ಕಣ್ಣುಗಳು ಆರು ಗಂಟೆಗಳು ಜೀವಂತವಾಗಿರುತ್ತದೆ. ಎಷ್ಟೋ ಜನ  ಕಣ್ಣಿಲ್ಲದೇ ಏನು ನೋಡಿಲ್ಲ. ಅಂತಹವರಿಗೆ ನಿಮ್ಮ ಕಣ್ಣುಗಳನ್ನು ದಾನ ಮಾಡಿ.‌ ಈ ರೀತಿಯ ಸಿನಿಮಾ ಬರುವುದು ವಿರಳ. ಚಿತ್ರತಂಡಕ್ಕೆ ಶುಭಾಶಯವೆಂದರು ಮಿಂಟೋ ಆಸ್ಪತ್ರೆ ನಿರ್ದೇಶಕರಾದ ಡಾ.ಸುಜಾತ ರಾಥೋಡ್.

ನಾನು ಈ ಕಥೆ ಸಿದ್ದಮಾಡಿಕೊಂಡು ಐದು ವರ್ಷಗಳ ಕಾಲ ನಿರ್ಮಾಪಕರಿಗೆ ಹುಡುಕಾಡಿದೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು ಅಂತಾರಲ್ಲ..ಹಾಗೆ ಈಗ ಸಮಯ ಕೂಡಿ ಬಂದಿದೆ. ಸಿನಿಮಾ ಸಿದ್ದವಾಗಿದೆ. ಎಲ್ಲರ ಹಾರೈಕೆಯಿಂದ ರಾಷ್ಟ್ರಪ್ರಶಸ್ತಿಯೂ ಬಂದಿದೆ.

ನನ್ನದು ಚಿಕ್ಕಹಳ್ಳಿ ಅಲ್ಲಿ ಪೇಪರ್ ಕೂಡ ಸಿಗಲ್ಲ. ನನ್ನ ಚಿತ್ರಕ್ಕೆ ರಾಷ್ಟಪ್ರಶಸ್ತಿ ಬಂದಾಗ, ಎಲ್ಲಾ ಪತ್ರಿಕೆಗಳಲ್ಲಿ ಫೋಟೊ ಬಂದಿತ್ತು. ಅದನ್ನು ನೋಡಲು ನನ್ನ ಅಪ್ಪ ಏಳು ಕಿಲೋಮೀಟರ್ ದೂರದಿಂದ ಪತ್ರಿಕೆ ಕೊಂಡು, ನೋಡಿ ಸಂತೋಷ ಪಟ್ಟಿದ್ದರು. ನಾನು ಇಲ್ಲಿಯವರೆಗೂ ನನ್ನ ತಾಯಿಗೆ ಒಂದು ಸೀರೆ ಕೂಡ ಕೊಡಿಸಿಲ್ಲ. ಈ ಸಂತಸವೇ ನನ್ನ ಹೆತ್ತವರಿಗೆ ನನ್ನ ಗಿಫ್ಟ್ ಎಂದರು ನಿರ್ದೇಶಕ ಮನೋಜ್ ಕುಮಾರ್.

ಚಿತ್ರ ತೆರೆಗೆ ತರುತ್ತಿರುವ ಉದ್ಯಮಿ ಗುಪ್ತ, ಚಿತ್ರದಲ್ಲಿ ಅಭಿನಯಿಸಿರುವ ಗೋವಿಂದೇಗೌಡ, ಬೇಬಿ ಸೌಮ್ಯ ಪ್ರಭು, ಮಾಸ್ಟರ್ ಮಿಥುನ್, ಇಳಾ ವಿಟ್ಲ ಮುಂತಾದವರು ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ‌ಹಂಚಿಕೊಂಡರು. ಕಲಾದೇಗುಲ ಶ್ರೀನಿವಾಸ್ ಅವರೊಂದಿಗೆ ರಮೇಶ್ ಹಾಗೂ ರವಿ ಹೆಚ್ ಎಸ್ ಸೇರಿಕೊಂಡು ಚಿತ್ರವನ್ನು ನಿರ್ಮಿಸಿದ್ದಾರೆ.

Exit mobile version