ನಾಲ್ಕು ಲಕ್ಷ ಸಮೀಪದತ್ತ ಕೊರೋನಾ ಸೋಂಕಿತರು: ೨೪ಗಂಟೆಯಲ್ಲಿ 3,645 ಮಂದಿ ಸಾವು

ದೆಹಲಿ, ಏ. 29: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3.79 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಗರಿಷ್ಠ ಪ್ರಕರಣಗಳ ದಾಖಲೆ ಬರೆದಿದೆ. ದೇಶದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 1.8 ಕೋಟಿ (1,83,76,524) ಆಗಿದೆ. ಕಳೆದ 24 ಗಂಟೆಗಳಲ್ಲಿ 3,645 ಮಂದಿ ಸಾವಿಗೀಡಾಗಿದ್ದು ಮೃತರ ಸಂಖ್ಯೆ 2.04 ಲಕ್ಷ (2,04,832) ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ 1ರಂದ ಕೊವಿಡ್ ಲಸಿಕೆ ವಿತರಣೆ ನಡೆಯಲಿದ್ದು, 1.33 ಕೋಟಿ ಜನರು Co-Win ಪೋರ್ಟಲ್​ ನಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಲಸಿಕೆ ಪಡೆಯಲು ಹೆಸರು ನೋಂದಣಿ ಪ್ರಕ್ರಿಯೆ ಬುಧವಾರ ಸಂಜೆ 4 ಗಂಟೆಗೆ ಆರಂಭವಾಗಿತ್ತು.

ಆದಾಗ್ಯೂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊವಿಡ್ ಎರಡನೇ ಅಲೆ ಗಂಭೀರ ಪರಿಣಾಮ ಬೀರಿದ್ದು ಕಳೆದ 10 ದಿನಗಳಲ್ಲಿ ಇಲ್ಲಿ 3,094 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ಬುಧವಾರ 985 ಮಂದಿ ಸಾವಿಗೀಡಾಗಿದ್ದು, ಅತೀ ಹೆಚ್ಚು ಸಾವು ದಾಖಲೆಯಾದ ದಿನವಾಗಿದೆ.

ದೇಶದಾದ್ಯಂತವಿರುವ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳ ಸಂಖ್ಯೆ ಜಾಸ್ತಿ ಆಗಿದ್ದು ಕಳೆದ 9 ದಿನಗಳಲ್ಲಿ ವೈದ್ಯಕೀಯ ಆಕ್ಸಿಜನ್ ಗೆ ಬೇಡಿಕೆ ಶೇ 67ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಏಪ್ರಿಲ್ 15ರ ಹೊತ್ತಿಗೆ 12 ರಾಜ್ಯಗಳಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದ್ದು ಏಪ್ರಿಲ್ 24ರ ಹೊತ್ತಿಗೆ 22 ರಾಜ್ಯಗಳು ಆಕ್ಸಿಜನ್ ಗಾಗಿ ಬೇಡಿಕೆಯೊಡ್ಡಿವೆ.

Exit mobile version