ಗಟ್ಟಿ ಹಾಗೂ ಉದ್ದವಾದ ಉಗುರುಗಳು ಬೇಕೇ? ಇಲ್ಲಿದೆ ಮನೆಮದ್ದುಗಳು

ಹೆಚ್ಚಿನ ಹುಡುಗಿಯರಿಗೆ ತಮ್ಮ ಕೈಬೆರಳ ಉಗುರುಗಳು ಉದ್ದವಾಗಿರಬೇಕು, ಗಟ್ಟಿಯಾಗಿರಬೇಕು, ಅದಕ್ಕೆ ಬೇಕಾದಂತ ಸ್ಟೈಲ್ ಮಾಡಬೇಕು ಎಂಬ ಆಸೆಯಿರುತ್ತದೆ. ಆದರೆ ಕೆಲವರು ಎಷ್ಟೇ ಪ್ರಯತ್ನ ಮಾಡಿದರೂ ಸಹ ಉದ್ದ ಉಗುರಗಳನ್ನು ಪಡೆಯಲು ಸಾಧ್ಯವಾಗುವುದೇ ಇಲ್ಲ. ಸ್ವಲ್ಪ ಉದ್ದ ಬೆಳೆಯುವಾಗಲೇ ತುಂಡಾಗುತ್ತವೆ. ಇಂತಹವರು ತಮ್ಮ ಉಗುರುಗಳನ್ನು ಬಲವಾಗಿಸಲು ಮತ್ತು ಹೆಚ್ಚು ಕಾಲ ಉಳಿಸಿಕೊಳ್ಳಲು ಈ ಮನೆಮದ್ದುಗಳನ್ನು ಬಳಸಬಹುದು.

ಉಗುರಗಳನ್ನು ಬಲವಾಗಿಸುವ ಮನೆಮದ್ದುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ತೆಂಗಿನ ಎಣ್ಣೆ:
ತೆಂಗಿನ ಎಣ್ಣೆ ಉಗುರನ್ನು ಗಟ್ಟಿಯಾಗಿಡಲು ಸಹಾಯ ಮಾಡುವ ಗುಣವನ್ನು ಹೊಂದಿದೆ. ಅದಕ್ಕಾಗಿ ನೀವು 4-5 ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಆ ಎಣ್ಣೆ ತಣ್ಣಗಾದ ನಂತರ ನಿಮ್ಮ ಉಗುರುಗಳನ್ನು ಈ ಎಣ್ಣೆಯಲ್ಲಿ ಐದು ನಿಮಿಷಗಳ ಕಾಲ ಅದ್ದಿ, ನಿಧಾನವಾಗಿ ಉಗುರಗಳನ್ನು ಮಸಾಜ್ ಮಾಡಿ. ಇದನ್ನು ಕನಿಷ್ಠ ಐದು ದಿನಗಳವರೆಗೆ ಮುಂದುವರೆಸಿ. ತೆಂಗಿನ ಎಣ್ಣೆ ಉಗುರುಗಳನ್ನು ಉದ್ದವಾಗಿ ಮತ್ತು ಬಲವಾಗಿ ಬೆಳೆಯುವಂತೆ ಮಾಡುವುದು.

ಆಪಲ್ ಸೈಡರ್ ವಿನೆಗರ್:
ಸೌಂದರ್ಯ ಸ್ನೇಹಿಯಾಗಿರುವ ಆಪಲ್ ಸೈಡರ್ ವಿನೆಗರ್ ಸದೃಢವಾದ ಉಗುರುಗಳನ್ನು ಪಡೆಯಲು ಸಹ ಸಹಾಯ ಮಾಡುವುದು. ಇದಕ್ಕಾಗಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಗೆ ಒಂದು ಚಮಚ ತುರಿದ ಬೆಳ್ಳುಳ್ಳಿಯನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಉಗುರುಗಳಿಗೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಇದನ್ನು ಮಾಡುವುದರಿಂದ, ಉಗುರುಗಳ ಬೆಳವಣಿಗೆ ಮತ್ತು ಶಕ್ತಿ ಹೆಚ್ಚಾಗುತ್ತದೆ.

ಕಿತ್ತಳೆ ಮತ್ತು ಮೊಟ್ಟೆ:
ಮೊಟ್ಟೆಯಲ್ಲಿ ಉಗುರು ಬೆಳೆಯಲು ಅಗತ್ಯವಾದ ಪ್ರೋಟೀನ್ ಸಮೃದ್ಧವಾಗಿದ್ದು, ಜೊತೆಗೆ ಕಿತ್ತಳೆಯು ಉಗುರನ್ನು ಬಲವಾಗುವಂತೆ ಮಾಡುವುದು. ಇದಕ್ಕಾಗಿ 2 ಟೀಸ್ಪೂನ್ ಕಿತ್ತಳೆ ರಸಕ್ಕೆ ಒಂದು ಮೊಟ್ಟೆಯ ಬಿಳಿ ದ್ರಾವಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಉಗುರುಗಳ ಮೇಲೆ 10 ನಿಮಿಷಗಳ ಕಾಲ ಬಿಡಿ. ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದನ್ನು ಮಾಡುವುದರಿಂದ, ಉಗುರುಗಳ ಹೊಳಪು ಹೆಚ್ಚಾಗುವುದಲ್ಲದೇ, ಉಗುರುಗಳು ಬಲವಾದಿ ಬೆಳೆಯಲು ಸಹಾಯವಾಗುವುದು.

ಬೆಳ್ಳುಳ್ಳಿ:
ಬೆಳ್ಳುಳ್ಳಿಯು ಸಹ ಉಗುರನ್ನು ಬಲವಾಗಿಡಲು ಸಹಾಯ ಮಾಡುವುದು. ಇದಕ್ಕಾಗಿ 2-3 ಬೆಳ್ಳುಳ್ಳಿಯ ಸಿಪ್ಪೆತೆಗೆದು ಮತ್ತು ಪುಡಿಮಾಡಿ. ಈ ಪುಡಿಯನ್ನು ಸುಮಾರು ಐದು ನಿಮಿಷಗಳ ಕಾಲ ಮೆಲ್ಲನೆ ಉಗುರುಗಳ ಮೇಲೆ ಉಜ್ಜಿಕೊಳ್ಳಿ. ಇದನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡಿ. ಇದರಿಂದ ಉಗುರು ಬೆಳವಣಿಗೆ, ಹೊಳಪು ಮತ್ತು ಶಕ್ತಿ ಹೆಚ್ಚಾಗುತ್ತದೆ.

ವಿಟಮಿನ್ -ಇ
ಮಾಯಿಶ್ಚರೈಸ್ಗಳ ಕೊರತೆಯಿಂದಾಗಿ ಉಗುರುಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ವಿಟಮಿನ್ ಇ ಎಣ್ಣೆ ಬಳಸುವುದರಿಂದ ಉಗುರು ಆರೋಗ್ಯಯುತವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ. ಇದಕ್ಕಾಗಿ ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ತೆಗೆಯಿರಿ. ಆ ಎಣ್ಣೆಯನ್ನು ಉಗುರುಗಳ ಮೇಲೆ ಹಚ್ಚಿ, 2-3 ನಿಮಿಷಗಳ ಕಾಲ ಮಸಾಜ್ ಮಾಡಿ. ನಿತ್ಯವೂ ಮಲಗುವ ಮುನ್ನ ಈ ವಿಧಾನವನ್ನು ಅನುಸರಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

Exit mobile version