ವೈದ್ಯಕೀಯ ಸೌಲಭ್ಯಗಳ ಕೊರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದವರ ವಿರುದ್ಧ ದೂರು ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

ನವದೆಹಲಿ, ಮೇ. 01: ಭಾರತದಲ್ಲಿ ಕೊರೊನಾ ಎರಡನೇ ಅಲೆ ಚಿಂತಾಜನಕ ಪರಿಸ್ಥಿತಿಯನ್ನು ಉಂಟು ಮಾಡಿದೆ. ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಸಿಗದೇ ಏರುಗತಿಯಲ್ಲಿ ಸಾಗುತ್ತಿದ್ದು ವೈದ್ಯಕೀಯ ಸೌಲಭ್ಯಗಳಲ್ಲಿ ಅಭಾವ ಸೃಷ್ಟಿಯಾಗಿದೆ. ಈ ಬಗ್ಗೆ ಕೊರೊನಾ ಸೋಂಕಿತರು ಹಾಗೂ ಅವರ ಕುಟುಂಬಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಸಾಲು ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ಅಲ್ಲದೇ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಸಿಜನ್, ಬೆಡ್, ವೈದ್ಯರ ಕೊರತೆ ಇದೆ ಸಹಾಯ ಮಾಡಿ ಎಂದು ಪೋಸ್ಟ್​ ಕೂಡಾ ಮಾಡಿದ್ದಾರೆ. ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಮಹತ್ವದ ಸಂದೇಶವೊಂದನ್ನು ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಕೇಳಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಎಲ್ಲ ರಾಜ್ಯದ ಡಿಜಿಪಿಗಳಿಗೆ ಸೂಚನೆ ನೀಡಿದೆ. ಅಲ್ಲದೇ ಒಂದುವೇಳೆ ಸುಪ್ರೀಂಕೋರ್ಟ್ ಹೊರಡಿಸಿರುವ ಈ ಆದೇಶ ಉಲಂಘಿಸಿ ಪ್ರಕರಣ ದಾಖಲಿಸಿಕೊಂಡರೆ ಪೊಲೀಸರ ವಿರುದ್ಧವೇ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದೆ.

ಸುಪ್ರೀಂಕೋರ್ಟ್​ನಲ್ಲಿ ದೇಶದ ಕೊರೊನಾ ಸ್ಥಿತಿಗತಿ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಲಸಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆಯನ್ನು ನ್ಯಾಯಾಲಯ ನೀಡಿದೆ. ದೇಶದ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡುವ ಬಗ್ಗೆ ಆಲೋಚಿಸಿ. ರಾಷ್ಟ್ರೀಯ ಲಸಿಕಾ ಅಭಿಯಾನದ ಕಾರ್ಯಕ್ರಮ ಜಾರಿಗೊಳಿಸಿ. ಯಾವ ರಾಜ್ಯ ಎಷ್ಟು ಲಸಿಕೆ ಪಡೆಯಬೇಕು ಎನ್ನುವುದನ್ನ ಕಂಪನಿಗಳ ನಿರ್ಧಾರಕ್ಕೆ ಬಿಡಬೇಡಿ. ಕೇಂದ್ರ, ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳಿಗೆ ಬೇರೆ ಬೇರೆ ಲಸಿಕೆ ಬೆಲೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇದೆಲ್ಲದರೊಂದಿಗೆ ವೈದ್ಯರು, ನರ್ಸ್​ಗಳಿಗೆ ಹೆಚ್ಚಿನ ವೇತನ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದು, ದೇಶದಲ್ಲಿ 25 ಸಾವಿರ ಎಂಬಿಬಿಎಸ್ ಪದವಿಧರರು ಪದವಿ ಪೂರ್ಣಗೊಳಿಸುತ್ತಿದ್ದಾರೆ. ಎರಡು ಲಕ್ಷ ನರ್ಸ್​ಗಳ ಪದವಿ ಪೂರ್ಣವಾಗ್ತಿದೆ. ಇವರ ಸೇವೆಯನ್ನು ಏಕೆ ಬಳಸಿಕೊಳ್ಳುತ್ತಿಲ್ಲ. ಈಗಲೇ ಕ್ರಮ ಕೈಗೊಳ್ಳದಿದ್ದರೆ ದೇಶದ ಆರೋಗ್ಯ ವ್ಯವಸ್ಥೆ ಕುಸಿದು ಬೀಳಲಿದೆ ಎಂದು ಜಸ್ಟೀಸ್ ಡಿ.ವೈ.ಚಂದ್ರಚೂಡ ಅವರ ಪೀಠದಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿದೆ.

Exit mobile version