ಹೆಳವರ ಗೋಳು ಕೇಳುವವರಿಲ್ಲ. ರಾಜ್ಯದ ಅಪರೂಪದ ಅಲೆಮಾರಿ ಜನಾಂಗಕ್ಕೆ ನೆಲೆಯಿಲ್ಲ. ತಲೆ ಮೇಲೆ ಸೂರಿಲ್ಲ, ತಿನ್ನೋಕೆ ಕೂಳಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲವೇ ಇಲ್ಲ. ಇದು ವಂಶ ವೃಕ್ಷದ ಸ್ವರೂಪ ಹೇಳುವವರ ದುಸ್ಥಿತಿ

Nomades are nowhere in Karnataka state. They don't have a house, proper food, health, education.

Nomades are no where in Karnataka state. They dont have house, proper food, health, education.

ರಾಜ್ಯದ ಅಲೆಮಾರಿ ಜನಾಂಗದ ಹೆಳವರ ದುಸ್ಥಿತಿ ನೋಡಿ. ವಂಶವೃಕ್ಷ ಹೇಳೋ ಹೆಳವರದ್ದು ಅಪರೂಪದ ವೃತ್ತಿ. ಆದ್ರೆ ಇವರ ತಲೆಮೇಲೆ ಸೂರಿಲ್ಲ. ತಿನ್ನೋಕೆ ಕೂಳಿಲ್ಲ, ಆರೋಗ್ಯವೂ ಇಲ್ಲ. ಶಿಕ್ಷಣ ಇಲ್ಲದೆ ಮಕ್ಕಳು ಭೀಕ್ಷಾಟನೆ ದೂಡಲ್ಪಡುತ್ತಿದ್ದಾರೆ

ನಮ್ಮ ರಾಜ್ಯದಲ್ಲಿ ಕಂಡು ಬರುವ ಅಪರೂಪದ ಅಲೆಮಾರಿ ಜನಾಂಗವೇ ಹೆಳವರು.ಉತ್ತರ ಕರ್ನಾಟಕದ ವಿಜಯಪುರ, ಬೆಳಗಾವಿ, ಬಾಗಲಕೋಟೆಯಲ್ಲಿ ಕಂಡು ಬರುವ ಇವರು, ಎಲ್ಲೂ ನೆಲೆ ನಿಲ್ಲದೆ ಊರಿಂದ ಊರಿಗೆ ಸಾಗುತ್ತ  ವಿಚಿತ್ರ ಬದುಕು ಸಾಗಿಸುತ್ತಿದ್ದಾರೆ. ಪಟ್ಟಣದ ಹೊರವಲಯದಲ್ಲಿ ಅಥವಾ ಗ್ರಾಮದ ಅಂಚಿನಲ್ಲಿ ಜೋಪಡಿ ಹಾಕಿಕೊಳ್ಳುವ ಹೆಳವರು, ಮುಂಜಾನೆಯೇ ಎದ್ದು ಬೀರಪ್ಪನ ನೆನೆದು ಹಣೆಗೆ ಬಂಡಾರ ತೇದು ದೇವರ ನೆನೆಯುತ ಅರಿವೆ ಚೀಲದಲ್ಲಡಗಿಸಿರುವ, ಪೂರ್ವಜರಿಂದ ಜಥನವಾಗಿರಿಸಿ ಕಾಪಿಟ್ಟಿರುವ ವಂಶವೃಕ್ಷದ ಹೂರಣವಿರುವ ಹೊತ್ತಿಗೆಯನ್ನು ಹೆಗಲಿಗೇರಿಸಿಕೊಂಡು ಮನೆ ಮನೆಗೆ ಹೋಗ್ತಾರೆ, ವಂಶ ವೃಕ್ಷದ ಇತಿಹಾಸ ಹೇಳ್ತಾರೆ.

300 ವರ್ಷದ ಇತಿಹಾಸ ಹೇಳ್ತಾರೆ: ಕುರುಬ ಜನಾಂಗಕ್ಕೆ ಸೇರಿದ ಹೆಳವರು ಕುಟುಂಬವೊಂದರ ಸುಮಾರು 300 ವರ್ಷದ ಇತಿಹಾಸ ಹೇಳುತ್ತಾರೆ. ರಾಮಾಯಣ ಮಹಾಭಾರತದ ಕಾಲದಲ್ಲೂ ರಾಜರುಗಳ ವಂಶವೃಕ್ಷವನ್ನು ದಾಖಲು ಮಾಡಿಕೊಳ್ಳಲು ಸೂತರೆಂಬ ಜನರಿದ್ದರು. ಕಾಳಿದಾಸನ ರಘುವಂಶ, ಕಲ್ಹಣನ ರಾಜತರಂಗಿಣಿ ಮುಂತಾದ ಕೃತಿಗಳಿಗೆಲ್ಲ ಈ ವಂಶ ಪ್ರವರಗಳೇ ಆಧಾರವಾಗಿವೆ. ಇದುವರೆಗೆ ಪ್ರಚಲಿತದಲ್ಲಿರುವ ಹಾಗೆ, ಕನ್ಫ್ಯೂಷಿಯಸ್ ಮನೆತನದ ವಂಶಾವಳಿಯ ದಾಖಲೆಯೇ ಅತೀ ಪ್ರಾಚೀನವಾದ ತಲೆಮಾರಿನ ಪಟ್ಟಿ ಎಂದು ಪರಿಗಣಿಸಲಾಗಿದೆ. ಇದರ ಪರಂಪರೆ 2500 ವರ್ಷಗಳಿಂದಲೂ ಎಡೆಬಿಡದೆ ಸಾಗುತ್ತಾ ಬಂದಿದ್ದು, ಗಿನ್ನೆಸ್ ಬುಕ್ಕಿನಲ್ಲಿ ಸ್ಥಾನ ಪಡೆದಿದೆ!

ಇಡೀ ವಂಶದ ದಾಖಲೆ ಇವರಲ್ಲಿದೆ: ಹೆಳವರ ಉದ್ಯೋಗ ಬಹುಶಃ ಜಗತ್ತಿನಲ್ಲಿಯೇ ಅತ್ಯಂತ ಅಪರೂಪದ್ದು. ಇವರು ಕೆಲವು ನಿರ್ದಿಷ್ಟ ಮನೆತನಗಳ ವಂಶವೃಕ್ಷದ ದಾಖಲಾತಿ ಇಟ್ಟುಕೊಳ್ಳುವ ಕಾಯಕದವರು. ಒಂದು ಮನೆತನದವರು ಮೂಲತಃ ಎಲ್ಲಿಯವರು, ಯಾರ ತಲೆಮಾರಿನಲ್ಲಿ ಯಾವ ಊರಿಗೆ ಬಂದರು, ಅವರಿಗೆ ಎಷ್ಟು ಜನ ಮಕ್ಕಳು? ಅವರ ಅವರೆಲ್ಲಾ ಇರುವ ಜಾಗ ಯಾವುದು? ಉದ್ಯೋಗವೇನು? ಇತ್ಯಾದಿ ಇತ್ಯಾದಿ….ಇದನ್ನೆಲ್ಲಾ ಅವರೊಂದು ಉದ್ದನೆಯ ಹಾಳೆಗಳ ವಿಶೇಷವಾದ ಪುಸ್ತಕದಲ್ಲಿ  ಮಾದರಿಯಲ್ಲಿ ಬರೆದುಕೊಂಡು (ಇವರು ತಮ್ಮ ಪುಸ್ತಕಕ್ಕೆ ಖಾತೆಕಿರ್ದಿ ಎನ್ನುತ್ತಾರೆ) ಇವರ ಪುಸ್ತಕದಲ್ಲಿ ಯಾವ್ಯಾವ ಮನೆತನಗಳ ವಿವರಗಳು ಇವೆಯೋ, ಅವರ ವಂಶದ ಕುಡಿಗಳು ಇರುವ ಎಲ್ಲ ಜಾಗಗಳಿಗೂ ಹೋಗಿ, ಅವರ ಮನೆಯಲ್ಲಿ ಕುಳಿತು, ಅವರೆದುರಿಗೆ ತಮ್ಮ ದಾಖಲಾತಿ ಪುಸ್ತಕದ ವಿವರಗಳನ್ನು “ಹಾಡಿ” ಹೌದು! ಇವರು ಸುದ್ದಿ ಓದುವವರ ಹಾಗೆ ವಿವರಗಳನ್ನು ಓದದೇ, ತಮ್ಮದೇ ಆದ ವಿಶಿಷ್ಟ ಗೇಯದಲ್ಲಿ ಹಾಡುತ್ತಾ ನಿರೂಪಣೆ ಮಾಡುತ್ತಾರೆ.

ದಾಖಲೆಯೇ ಜೀವನಾಧಾರ : ಸಾಮಾನ್ಯವಾಗಿ ಗಾಢವಾದ ಗುಲಾಬಿ ಬಣ್ಣದ ಶಾಲಿನಲ್ಲಿ ತಮ್ಮ ಕಡತಗಳನ್ನು ಹೊತ್ತುಕೊಂಡು, ತಲೆಗೆ (ಮುಂಡಾಸು ಸುತ್ತಿಕೊಂಡು, ಬಿಜಾಪುರ ಶೈಲಿಯ ಕಚ್ಚೆ ತೊಟ್ಟುಕೊಂಡು ಊರೂರು ಸುತ್ತುವುದನ್ನು ನಾವು ನೋಡಬಹುದು. ಉತ್ತರ ಕರ್ನಾಟಕದ ವಿಜಯಪುರ, ಬೆಳಗಾವಿ, ಬಾಗಲಕೋಟೆಯಲ್ಲಿ ಹೆಚ್ಚಾಗಿ ನೆಲೆವೂರುವ ಕುಟುಂಬಗಳು ವರ್ಷವಿಡಿ ಹತ್ತಾರು ಜಿಲ್ಲೆಗಳನ್ನು ಸುತ್ತಾಡಿ, ಮಾಹಿತಿ ಕಲೆಹಾಕಿ ವಂಶವೃಕ್ಷ ಓದಿ, ಕುಟುಂಬವು ನೀಡುವ ದಾನ ಸ್ವೀಕಾರ ಮಾಡುತ್ತಾರೆ. ರೋಣ, ಮಲ್ಲಾಪೂರ, ಹಿರೇಮಣ್ಣೂರ, ಚಿಕ್ಕಮಣ್ಣೂರ, ಸವಡಿ, ಬಾಸಲಾಪೂರ, ಮುದೇನಗುಡಿ, ಅರಹುಣಸಿ, ಹುಲ್ಲೂರ, ಕುರಹಟ್ಟಿಯಲ್ಲಿ ಈಗ ಹೆಳವರ ಕುಟುಂಬವು ನೂತನ ದಂಪತಿ ವಿವರ, ಹುಟ್ಟಿದ ಮಕ್ಕಳ ವಿವರ ಸಂಗ್ರಹಿಸುತ್ತಾರೆ. ಯಾರಾದರೂ ಮೃತಪಟ್ಟರೆ ಅಂಥವರ ಹೆಸರನ್ನು ಕಂಚಿನ ಪತ್ರದಲ್ಲಿ ನಮೂದಿಸುತ್ತಾರೆ. ಇದಲ್ಲದೆ ತವರು ಮನೆ ಸಮಗ್ರ ಮಾಹಿತಿ , ವಿವಾಹದ ದಿನಾಂಕ ಮತ್ತು ವಾರವನ್ನು ಖಾತೆ ಕಿರ್ದಿ ತರಹವಿರುವ ದಾಖಲಾತಿ ಪುಸ್ತಕದಲ್ಲಿ ಬರೆದುಕೊಳ್ಳುತ್ತಾರೆ. ನ್ಯಾಯಲಯದಲ್ಲಿ ಮಹತ್ವ- ವಂಶಾವಳಿ ಓದುವ ಮೂಲಕ ಆದಿಕಾಲದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಹೆಳವರ ಸಾಕ್ಷಿಗೆ ನ್ಯಾಯಾಲಯದಲ್ಲಿಯೂ ಮಾನ್ಯತೆ ಇದೆ. ಹಲವು ವ್ಯಾಜ್ಯಗಳಲ್ಲಿ ನ್ಯಾಯಾಲಯಕ್ಕೆ ಗೊಂದಲ ಉಂಟಾದಾಗ ಹೆಳವರು ಕೊಡುವ ತೀರ್ಪು, ನ್ಯಾಯಾಲಯದ ತೀರ್ಪನಷ್ಟೆ ಮಹತ್ವ ಪಡೆದಿದೆ ಎನ್ನುತ್ತಾರೆ ಹಿರಿಯರು. ಹೆಳವರ ಸ್ಥಾನ, ಮಾನ, ಗೌರವ ಉಳಿವಿಗಾಗಿ ನಮ್ಮ ಹಿರಿಯರು ಜೀವನವನ್ನೆ ಮುಡುಪಾಗಿಟ್ಟಿದ್ದಾರೆ. ಅದನ್ನೆ ಮುಂದುವರೆಸಿಕೊಂಡು ನಾವು ಹೊರಟಿದ್ದೇವೆ ಎನ್ನುತ್ತಾರೆ ಹೆಳವರ ಮುಖಂಡ ಮುದಕಪ್ಪ ಹೆಳವರ.

ಯಜಮಾನನ ಉಡುಗೊರೆಯೇ ಜೀವನಾಧಾರ: ಮನೆಯ ಮಾಲೀಕರ ಮನೆತನವನ್ನು ತಮ್ಮದೇ ಆದ ಶೈಲಿಯಲ್ಲಿ ಹೊಗಳಿ, ಅವರಿಗರಿವಿರದ ಅವರ ವಂಶಾವಳಿಯನ್ನ ಹೇಳೋ ವಿಭಿನ್ನ ಕಾಯಕ ಹೆಳವರದ್ದು. ಯುವಪೀಳಿಗೆಗೆ ಪೂರ್ವಜರ ಪರ ಅರಿವು ಮೂಡಿಸಿ ಅವರ ಮನೆತನದ ಬಗ್ಗೆ ಅಭಿಮಾನ ಇಮ್ಮಡಿಗೊಳಿಸೋ ಕೆಲಸವನ್ನು ಹೆಳವರು ಮಾಡ್ತಾರೆ. ಇವರಿಂದ ಮನೆತನದವರ ಸಂತತಿಯ ಇತಿಹಾಸ ತಿಳಿಯಲು ಸಾಧ್ಯವಾಗುತ್ತಿದೆ. ಹಳೆ ಸುಗ್ಗಿ ಮುಗಿಸಿ ಹೊಸ ಮುಂಗಾರು ಬಿತ್ತನೆಯ ನಡುವೆ, ರೈತರ ಮನೆಗಳಿಗೆ ತೆರಳಿ ಅವರ ಹಳೆಯ ಮನೆತನದವರ ಪರಿಚಯದ ಜೊತೆಗೆ ಹೊಸದಾಗಿ ಮದುವೆ ನಡೆದಲ್ಲಿ ಸೊಸೆಯರು ಮತ್ತು ಮಕ್ಕಳಾದಲ್ಲಿ ಅವರ ದಾಖಲಾತಿ ಮಾಡಿಕೊಳ್ಳುತ್ತಾರೆ. ವಂಶವೃಕ್ಷ ಕೇಳುವ ಯಜಮಾನ ತನ್ನಿಷ್ಟದಂತೆ ಉಡುಗೊರೆಯೇ ಜೀವನಕ್ಕೆ ಆಧಾರ. ಉತ್ತರ ಕರ್ನಾಟಕದ ವಿಜಯಪುರ, ಬೆಳಗಾವಿ, ಬಾಗಲಕೋಟೆಯಲ್ಲಿ ಹೆಚ್ಚಾಗಿ ನೆಲೆವೂರುವ ಕುಟುಂಬಗಳ ಜೀವನ ಮಾತ್ರ ಅತ್ಯಂತ ಶೋಚನೀಯವಾಗಿದೆ.

ಕೊಲಾರಿಯಲ್ಲಿ ಬದುಕಿನ ಪಯಣ : ಅಲೆಮಾರಿಗಳಂತೆ ರಾಜ್ಯ ಸುತ್ತುವ ಹೆಳವರು ಎತ್ತಿನ ಬಂಡಿಗೆ ಕೊಲ್ಹಾರಿ (ಮೆಲ್ ಹೊದಿಕೆ)ಯನ್ನು ಸಿದ್ಧಪಡಿಸಿಕೊಂಡು ಹೊರಡುತ್ತಾರೆ. ಇದು ಗುಡಿಸಲುಗಳು ಇರುವ ಮಾದರಿಯಲ್ಲೇ ಇರುತ್ತದೆ. ಇದರಲ್ಲಿ ನಿತ್ಯ ಜೀವನಕ್ಕೆ ಬೇಕಾಗುವ ಎಲ್ಲ ಸಾಮಗ್ರಿ ಇರುತ್ತದೆ. ಪಯಣದ ನಡುವೆ ಬರುವ ಕುಟುಂಬಗಳ ಯೋಗಕ್ಷೇಮ ವಿಚಾರಿಸುತ್ತಾ ಸಾಗುತ್ತಾರೆ. ನೆಲವೂರುವ ಜಾಗದ ಹೊರವಲಯ ಅಥವಾ ಖಾಲಿ ಜಾಗದಲ್ಲಿ ಗಾಡಿಯನ್ನು ನಿಲ್ಲಿಸಿ, ಜೋಪಡಿ ಹಾಕಿ ಜೀವನ ಸಾಗಿಸುತ್ತಾರೆ. ಇವರಿಗೆ ಶಾಶ್ವತವಾದ ನೆಲೆ ಇಲ್ಲ. ಪೂರ್ವಜನರ ಬಗ್ಗೆ, ವಂಶವೃಕ್ಷದ ಸ್ವರೂಪ ಹೇಳುವ ಈ ಜನಾಂಗದ ಜನರ ಮಕ್ಕಳ ಭವಿಷ್ಯ ಮಾತ್ರ ಕತ್ತಲೆಯಿಂದ ಕೂಡಿದೆ. ವರ್ಷವಿಡಿ ಊರೂರು ಅಲೆಯುವ ಹೆಳವರಲ್ಲಿ ಪ್ರೌಢಮಟ್ಟದ ಹಾಗೂ ಕಾಲೇಜು ಮೆಟ್ಟಿಲು ಹತ್ತುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಓದಲು,ಬರೆಯಲು ಬರುವವರೆಗೆ ಮಾತ್ರ ಶಿಕ್ಷಣ ಪಡೆಯುವ ಇವರು ಪೂರ್ಣ ಪ್ರಮಾಣದ ಶಿಕ್ಷಣ ಪಡೆಯುತ್ತಿಲ್ಲ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಶಿಕ್ಷಣ ಗಗನಕುಸುಮವಾಗಿದೆ. ಇವರು ಅಲೆಮಾರಿಗಳಾಗಿರುವುದರಿಂದ ಇವರು ಜಾತಿಗಣತಿಯೊಳಗೂ ಸೇರದೆ ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ.

ಇನ್ನು ಇವರು ಊರ ಹೊರಗಿನ ಮೈದಾನವೋ, ಖಾಲಿ ಜಾಗದಲ್ಲೋ ಜೋಪಡಿ ಹಾಕಿ ವಾಸಿಸ್ತಾರೆ. ಯಾವುದೇ ಸುರಕ್ಷತೆ ಇಲ್ಲದೆ ಮೂಲಭೂತ ಸೌಕರ್ಯಗಳಿಲ್ಲದೆ ಬದುಕೋ ಇವರಲ್ಲಿ ಅನೇಕರಿಗೆ ವಿಷಕಾರಿ ಜಂತು ಕಚ್ಚಿ ಪ್ರಾಣಾಪಾಯಗಳೂ ಸಂಭವಿಸಿವೆ. ಆದರೂ ತಲೆಮಾರುಗಳಿಂದ  ಬಂದ ಕೆಲಸವನ್ನು ಬೀಡಲು ಆಗುವುದಿಲ್ಲ ಎನ್ನುತ್ತಾರೆ ರಾಮಣ್ಣ. ಒಟ್ಟಾರೆ, ಹೆಳವರ ಬದುಕು ಅತ್ಯಂತ ಶೋಚನೀಯವಾಗಿದೆ. ಇನ್ನು ಇವರ ಮಕ್ಕಳ ಬದುಕು ಅಂಧಕಾರದಲ್ಲಿ ತುಂಬಿ ಹೋಗಿದೆ. ಇವರ ಕಲ್ಯಾಣಕ್ಕಾಗಿಯೇ ರಾಜ್ಯ ಸರ್ಕಾರಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ನಿಗಮದ ಮೂಲಕ ಇವರ ಪ್ರಗತಿಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಅಂತಾರೆ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ. ಅಧ್ಯಕ್ಷರ ಭರವಸೆ ಬೇಗ ಈಡೇರಲಿ. ಅಲೆಮಾರಿ ಜನಾಂಗದವರ ಕಷ್ಟ ಅರಿತು, ಸರ್ಕಾರ ಇವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಅವರಿಗೆ ಗೌರವಯುತ ಬಾಳು ನೀಡಲಿ ವಿಜಯಟೈಮ್ಸ್‌ ಆಶಯವಾಗಿದೆ

ವಿ.ಜಿ.ವೃಷಭೇಂದ್ರ, ಕೂಡ್ಲಿಗಿ

…………………………………………………………………………

Exit mobile version