ಉತ್ತರ ಕೊರಿಯಾ: ಇದುವರೆಗೆ ಒಂದೂ ಕೊರೊನಾ ಕೇಸಿಲ್ಲ, ಅನುಮಾನ ವ್ಯಕ್ತಪಡಿಸಿದ ತಜ್ಞರು

ಉತ್ತರ ಕೊರಿಯಾ,ಜೂ.22: ಜೂನ್ 10ರವರೆಗೆ 30 ಸಾವಿರ ಮಂದಿಗೆ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಒಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಉತ್ತರ ಕೊರಿಯಾ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಿದೆ. ಆದರೆ, ಇದಕ್ಕೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಕೊರಿಯಾದಲ್ಲಿ ಕೋವಿಡ್ ಮೇಲ್ವಿಚಾರಣಾ ವರದಿಯನ್ನು ಮಂಗಳವಾರ ಉಲ್ಲೇಖಿಸಿ ವಿವರ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಜೂನ್ 4 ರಿಂದ 10 ಅವಧಿಯೊಳಗೆ 733 ಮಂದಿಗೆ ಕೋವಿಡ್‌ –19 ಸೋಂಕು ಪರೀಕ್ಷಾ ನಡೆಸಲಾಗಿತ್ತು. ಅದರಲ್ಲಿ 149 ಜನರು ಇನ್‌ಫ್ಲ್ಯೂಯೆಂಜಾ ತರಹದ ಕಾಯಿಲೆಗಳು ಅಥವಾ ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿರುವುದಾಗಿ ತಿಳಿಸಿದೆ.

ಅಷ್ಟೇನು ಉತ್ತಮ ಆರೋಗ್ಯ ಮೂಲಸೌಕರ್ಯದ ವ್ಯವಸ್ಥೆ ಹೊಂದಿಲ್ಲದ ಈ ರಾಷ್ಟ್ರವು, ತನ್ನ ಮಿತ್ರ ರಾಷ್ಟ್ರವಾದ ಚೀನಾದೊಂದಿಗೆ ಗಡಿ ಹಂಚಿಕೊಂಡಿದೆ. ಆದೂ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿಲ್ಲ ಎಂಬ ಉತ್ತರ ಕೊರಿಯಾದ ಹೇಳಿಕೆಯು ಅನುಮಾನಗಳನ್ನು ಮೂಡಿಸುತ್ತವೆ ಎಂದು ತಜ್ಞರು ದೂರಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧದ ಹೋರಾಟವನ್ನು ರಾಷ್ಟ್ರೀಯ ಅಸ್ತಿತ್ವದ ವಿಷಯ ಎಂದು ವಿವರಿಸಿರುವ ಉತ್ತರ ಕೊರಿಯಾ, ಸೋಂಕು ತಡೆಯುವುದಕ್ಕಾಗಿ ತಮ್ಮ ದೇಶಕ್ಕೆ ಬರುವ ಪ್ರವಾಸಿಗರಿಗೆ ನಿಷೇಧ ಹೇರಿದೆ. ರಾಜತಾಂತ್ರಿಕರನ್ನು ವಾಪಸ್ ಕಳುಹಿಸಿ, ಗಡಿಯಾಚೆಗಿನ ಸಂಚಾರ ಮತ್ತು ವ್ಯಾಪಾರದ ಮೇಲೂ ನಿರ್ಬಂಧ ಹೇರಿದೆ.

Exit mobile version