ಅವಹೇಳನವೆಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು!

ಪ್ರವಾದಿ(Prophet) ಮಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಉಗ್ರ ಸಂಘಟನೆ ಅಲ್‍ಖೈದಾ(Al-Qaeda) ಭಾರತದ(India) ಮೇಲೆ ಆತ್ಮಾಹುತಿ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.

ಈ ಮೂಲಕ ನೂಪುರ್ ಶರ್ಮಾ(Nupur Sharma) ಎಂಬ ಹಿಂದೂ ಮಹಿಳೆ ನೀಡಿದ ಹೇಳಿಕೆ ಇಸ್ಲಾಮಿಕ್ ಜಗತ್ತಿನಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಆದರೆ ಅವಹೇಳನವೆಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಭಾರತ ಸದೃಢ ಪ್ರಜಾಪ್ರಭುತ್ವವನ್ನು(Democracy) ಹೊಂದಿದೆ. ಪ್ರಜಾಪ್ರಭುತ್ವದ ಸೌಂದರ್ಯವೇ ಅಭಿವ್ಯಕ್ತಿ ಸ್ವಾತಂತ್ರ್ಯ. ಅವಹೇಳನಕ್ಕೂ, ಟೀಕೆಗೂ ವ್ಯತ್ಯಾಸವಿದೆ. ಹೀಗಾಗಿ ಅವಹೇಳನದ ಹೆಸರಿನಲ್ಲಿ ಟೀಕೆಯನ್ನು ಹತ್ತಿಕ್ಕಲಾಗುತ್ತಿದೆ.

ನೂಪುರ್ ಶರ್ಮಾ ನೀಡಿದ ಹೇಳಿಕೆಯನ್ನು ಅವಹೇಳನ ಎಂದು ಅರ್ಥೈಸುವ ಮೂಲಕ ಇಡೀ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಆಕೆ ನೀಡಿದ ಹೇಳಿಕೆ ಅವಹೇಳನವೋ..? ಟೀಕೆಯೋ..? ಎಂಬುದನ್ನು ನಿರ್ಧರಿಸುವ ಶಕ್ತಿ ಭಾರತದ ನ್ಯಾಯಾಂಗ ವ್ಯವಸ್ಥೆಗಿದೆ. ಕತಾರ್, ಕುವೈತ್ ಮತ್ತು ಪಾಕಿಸ್ತಾನದಂತ ಇಸ್ಲಾಮಿಕ ರಾಷ್ಟ್ರಗಳಲ್ಲಿ ಅವಹೇಳನ ಎಂದು ಭಾವಿಸಲಾದ ಅನೇಕ ಹೇಳಿಕೆಗಳು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಾಗುತ್ತವೆ. ಹಿಂದೂ ಬಹುಸಂಖ್ಯಾತರಾದ ಭಾರತದಲ್ಲಿ ರಾಮನನ್ನು ಟೀಕಿಸುವ ಸ್ವಾತಂತ್ರ್ಯವಿದೆ.

ರಾಷ್ಟ್ರಪಿತ ಗಾಂಧಿಯನ್ನು ಟೀಕಿಸುವ ಮುಕ್ತ ಸ್ವಾತಂತ್ರ್ಯವಿದೆ. ದೈವದಿಂದ ಹಿಡಿದು ಎಲ್ಲವನ್ನೂ ಟೀಕಿಸುವ ಸ್ವಾತಂತ್ರ್ಯ ಭಾರತದಲ್ಲಿದೆ. ಹೀಗಾಗಿ ಟೀಕೆಯನ್ನು ಪ್ರಜಾಪ್ರಭುತ್ವದ ಆಧಾರಸ್ತಂಭ ಎಂದೇ ನಮ್ಮ ಸಂವಿಧಾನ ರಚನಾಕಾರರು ಭಾವಿಸಿದ್ದರು. ಹೀಗಾಗಿ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಅವಹೇಳನ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು.

Exit mobile version