ಅಕಾಲಿಕ ವಯಸ್ಸಿನಲ್ಲಿ ಉಂಟಾದ ಬಿಳಿಗೂದಲನ್ನು ಕಡಿಮೆ ಮಾಡುವ ತೈಲಗಳು

ಕೂದಲು ಬೆಳ್ಳಗಾಗುವುದು ವಯಸಸ್ಸಾದಂತೆ ಬರುವ ಸಂಗತಿಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಯುವಕರನ್ನೂ ಕಾಡುತ್ತಿದೆ. ಹೀಗೆ ಕಾಲವಲ್ಲದ ಕಾಲದಲ್ಲಿ ಬಿಳಿಕೂದಲು ಬಂದರೆ ಅದು ನಿಮ್ಮ ಆತ್ಮವಿಶ್ವಾಸವನ್ನೂ ಕುಂದಿಸುವ ಕೆಲಸ ಮಾಡುವುದು ಜೊತೆಗೆ ಚಿಕ್ಕ ವಯಸ್ಸಿನಲ್ಲಿ ಬರುವ ಬಿಳಿಕೂದಲು ಸಮಸ್ಯೆ ನಿಮ್ಮನ್ನು ಮಾನಸಿಕವಾಗಿ ತೊಂದರೆಗೀಡು ಮಾಡುವುದು. ಅನಾರೋಗ್ಯಕರ ಜೀವನಶೈಲಿ, ಆಹಾರ ಕಲಬೆರಕೆ, ರಾಸಾಯನಿಕಯುಕ್ತ ಶ್ಯಾಂಪೂಗಳ ಬಳಕೆ, ಕೂದಲಿನ ಬಣ್ಣ ಇತ್ಯಾದಿಗಳು ಕೂದಲು ಬಿಳಿ ಅಥವಾ ಬೂದು ಬಣ್ಣವಾಗಲು ಕಾರಣವಾಗುತ್ತದೆ. ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ, ಬಿಳಿ ಕೂದಲನ್ನು ಕಪ್ಪು ಮಾಡಬಹುದು. ಅವುಗಳನ್ನು ಈ ಕೆಳಗೆ ನೊಡೋಣ.

ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿ:
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇರುವುದರಿಂದ ಕೂದಲಿನ ಬೆಳವಣಿಗೆಗೆ ಅಗತ್ಯವಾಗಿರುವ ಕಾಲಜನ್ ಅನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಹೆಪ್ಪುಗಟ್ಟಿದ ತೆಂಗಿನ ಎಣ್ಣೆಗೆ 3 ಟೀ ಚಮಚ ನೆಲ್ಲಿಕಾಯಿ ಪುಡಿಯನ್ನು ಮಿಶ್ರಣ ಮಾಡಿ. ಈ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ, ತಣ್ಣಗಾಗಿಸಿ ಕೂದಲಿನ ಬೇರುಗಳಿಗೆ ಹಚ್ಚಿ. ಕೂದಲಿಗೆ ಹಚ್ಚುವಾಗ ಚೆನ್ನಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಬಿಟ್ಟು, ಬೆಳಿಗ್ಗೆ ಶಾಂಪೂ ಹಾಕಿ ಕೂದಲು ತೊಳೆಯಿರಿ. ಹೀಗೆ ಮಾಡುವುದರಿಂದ ಬಿಳಿಕೂದಲಿನ ಸಮಸ್ಯೆ ನಿಧಾನವಾಗಿ ಕಡಿಮೆಯಾಗುವುದಲ್ಲದೇ, ಕೂದಲಿನ ಇತರ ಸಮಸ್ಯೆಗಳು ಕಡಿಮೆಯಾಗುವುದು.

ಆಲಿವ್ ಎಣ್ಣೆ ಮತ್ತು ಕಾಳುಜೀರಿಗೆ ಎಣ್ಣೆ:
ಕಾಳು ಜೀರಿಗೆ ಎಣ್ಣೆ ಮತ್ತು ಆಲಿವ್ ಎಣ್ಣೆಯ ಮಿಶ್ರಣವು ಬಿಳಿ ಕೂದಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೂದಲನ್ನು ಕಪ್ಪಾಗಿಸುವುದರ ಜೊತೆಗೆ ಉತ್ತಮವಾಗಿ ಪೋಷಣೆಯನ್ನೂ ಮಾಡುವುದು. 1 ಚಮಚ ಆಲಿವ್ ಎಣ್ಣೆಯ ಜೊತೆ 1 ಚಮಚ ಕಾಳು ಜೀರಿಗೆ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿನ ಬೇರುಗಳಿಗೆ ಹಚ್ಚಿ, ಮಸಾಜ್ ಮಾಡಿ ಮತ್ತು ಒಂದು ಗಂಟೆ ಬಿಡಿ. ಅದರ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದನ್ನು ಮಾಡುವುದರಿಂದ ನಿಮ್ಮ ಕೂದಲು ಕಪ್ಪಾಗಿ ಹೊಳೆಯುವುದಲ್ಲದೇ, ಬಲವಾಗಿರುವಂತೆ ಮಾಡುತ್ತದೆ.

ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆ:
ಹರಳೆಣ್ಣೆಯಲ್ಲಿ ಕಬ್ಬಿಣ, ಮೆಗ್ನೀಸಿಯಮ್, ಸೆಲೆನಿಯಮ್, ಸತು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ ಜೊತೆಗೆ ಇದರಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನ್ ಕೂದಲು ಆರೋಗ್ಯಕರವಾಗಿರಿಸಲು ಸಹಾಯ ಮಾಡುವುದು. 2 ಟೀ ಚಮಚ ಸಾಸಿವೆ ಎಣ್ಣೆಯನ್ನು 1 ಟೀ ಚಮಚ ಹರಳೆಣ್ಣೆಯೊಂದಿಗೆ ಬೆರೆಸಿ ಬಿಸಿ ಮಾಡಿ. ಎಣ್ಣೆ ತಣ್ಣಗಾದ ನಂತರ ಅದನ್ನು ಕೂದಲಿನ ಬೇರುಗಳಿಗೆ ಹಚ್ಚಿ. 10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. 1 ಗಂಟೆಯ ನಂತರ ಶಾಂಪೂ ಬಳಸಿ ತೊಳೆಯಿರಿ. ಹರಳೆಣ್ಣೆ ತುಂಬಾ ದಪ್ಪವಾಗಿರುವುದರಿಂದ ನಿಮಗೆ ಜಿಗುಟಾದ ಅನುಭವವಾಗಬಹುದು. ಆದ್ದರಿಂದ ಚೆನ್ನಾಗಿ ಸ್ವಚ್ಛಗೊಳಿಸಿ.

ತೆಂಗಿನ ಎಣ್ಣೆ ಮತ್ತು ಮೆಹಂದಿ ಎಲೆಗಳು:
4 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ. ಅದರಲ್ಲಿ ಗೋರಂಟಿ ಅಥವಾ ಮೆಹೆಂದಿ ಎಲೆಗಳನ್ನು ಹಾಕಿ. ಎಣ್ಣೆ ಕಂದು ಬಣ್ಣ ಬರುವವರೆಗೆ ಕುದಿಸಿ ಮತ್ತು ತಣ್ಣಗಾದ ನಂತರ ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಮತ್ತು 40 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡಿ. ಇದು ನಿಮ್ಮ ಬಿಳಿ ಕೂದಲಿನ ಬಣ್ಣ ಬದಲಾಯಿಸುವುದಲ್ಲದೇ, ನೆತ್ತಿಗೂ ತಂಪಿನ ಅನುಭವ ನೀಡುವುದು.

Exit mobile version