ನಕಲಿ ನೆಗೆಟಿವ್‌ ವರದಿ ತೋರಿಸಿ ದುಬೈಗೆ ಹಾರಿದ ದ.ಆಫ್ರಿಕಾದ ಪ್ರಜೆ

ಬೆಂಗಳೂರು ಡಿ 13 : ನಕಲಿ ಒಮಿಕ್ರೋನ್‌ ವರದಿ ತೋರಿಸಿ ದಕ್ಷಿಣ ಆಫ್ರಿಕಾದ ಪ್ರಜೆಯೊಬ್ಬ ದುಬೈಗೆ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾ ಪ್ರಜೆ ನ.20ರಂದು ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಕೋವಿಡ್‌ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್‌ ವರದಿ ಬಂದಿತ್ತು.

ಬಳಿಕ ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಿ, ಕೊಠಡಿಯಿಂದ ಹೊರಗೆ ಕಳುಹಿಸದಂತೆ ಬಿಬಿಎಂಪಿ ಅಧಿಕಾರಿಗಳು, ಹೋಟೆಲ್‌ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ, ಮಹೇಂದ್ರ ಎಂಬ ಹೆಸರಿನ ಸೋಂಕಿತ ವ್ಯಕ್ತಿಯು ಖಾಸಗಿ ಲ್ಯಾಬ್‌ವೊಂದರಲ್ಲಿ ಪಡೆದಿದ್ದ ನೆಗೆಟಿವ್‌ ವರದಿಯನ್ನು ತೋರಿಸಿ, ನ.27ರಂದು ಮಧ್ಯರಾತ್ರಿ ಹೋಟೆಲ್‌ನಿಂದ ಟ್ಯಾಕ್ಸಿಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ದುಬೈಗೆ ಪರಾರಿಯಾಗಿದ್ದ.

ಬಳಿಕ ‘ಓಮಿಕ್ರಾನ್‌’ ವರದಿ ಬಂದಿತ್ತು. ಹೀಗಾಗಿ, ಪಾಲಿಕೆಗೆ ಮಾಹಿತಿ ನೀಡದೆಯೇ ಸೋಂಕಿತನನ್ನು ಹೊರ ಹೋಗಲು ಅವಕಾಶ ಮಾಡಿಕೊಟ್ಟಿದ್ದ ಹೋಟೆಲ್‌ನ ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

Exit mobile version