ರಾಜ್ಯದಲ್ಲಿಂದು 12 ಓಮಿಕ್ರಾನ್‌ ಸೋಂಕು ಪತ್ತೆ

ಬೆಂಗಳೂರು ಡಿ 23 : ದೇಶಾದ್ಯಂತ ಓಮಿಕ್ರಾನ್‌ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲೂ ಕೂಡ ಇಂದು ಓಮಿಕ್ರಾನ್‌ ಸ್ಫೋಟಗೊಂಡಿದೆ. ಒಂದೇ ದಿನದಲ್ಲಿ 12 ಜನರಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲೂ ಬೆಂಗಳೂರಿನ 10 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ 10 ಜನರಲ್ಲಿ, ಮಂಗಳೂರು ಹಾಗೂ ಮೈಸೂರಿನ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಆಫ್ರಿಕಾ ಖಂಡದ ಘಾನಾ ದೇಶದಿಂದ ಬಂದಿದ್ದ 27 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದರೆ, ಮೈಸೂರಿನಲ್ಲಿ ಸ್ವಿಜರ್ಲೆಂಡ್ ನಿಂದ ಬಂದಿದ್ದ 9 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ.

Exit mobile version