2029ಕ್ಕೆ ‘ಒಂದು ದೇಶ, ಒಂದು ಎಲೆಕ್ಷನ್’: ಕಾನೂನು ಆಯೋಗದಿಂದ ಬುಧವಾರ ಅಂತಿಮ ವರದಿ

New Delhi: ದೇಶದೆಲ್ಲೆಡೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪದ ಕುರಿತಂತೆ 22ನೇ ಕಾನೂನು ಆಯೋಗವು ಕೇಂದ್ರ (One Nation One Election) ಸರ್ಕಾರಕ್ಕೆ ಬುಧವಾರ ತನ್ನ ಅಂತಿಮ

ವರದಿ ಸಲ್ಲಿಸುವ ನಿರೀಕ್ಷೆ ಇದ್ದು, ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿರುವ ಕಾನೂನು ಆಯೋಗ ಕೆಲವು ಆಯ್ಕೆಗಳ ಜೊತೆಗೆ 2029ರಲ್ಲಿ ‘ಒಂದು ದೇಶ ಒಂದು ಚುನಾವಣೆ’ ಜಾರಿಗೆ ತರುವ ಸಲಹೆ

ನೀಡುವ (One Nation One Election) ಸಾಧ್ಯತೆ ಇದೆ.

ಇದರ ಜಾರಿಗೆ 2029ರ ಚುನಾವಣೆಯಲ್ಲಿ ಮುಂದಾಗಬಹುದೆಂಬ ಶಿಫಾರಸಿನೊಂದಿಗೆ ತನ್ನ ಅಂತಿಮ ವರದಿಯನ್ನು ಆಯೋಗ ಸಿದ್ಧಪಡಿಸಿದೆ. ಮುಂದಿನ 5 ವರ್ಷಗಳ ಕಾಲ ಸಾಧ್ಯವಾದಷ್ಟೂ ಚುನಾವಣೆಗಳನ್ನು

ಒಟ್ಟಿಗೆ ನಡೆಯುವಂತೆ (ಸಿಂಕ್ರೊನೈಜ್ಡ್‌ ಎಲೆಕ್ಷನ್ಸ್‌) ನೋಡಿಕೊಳ್ಳಬೇಕು. ಇದರಿಂದ 2029ರ ವೇಳೆಗೆ ಲೋಕಸಭೆ-ವಿಧಾನಸಭೆಗೆ ಏಕಕಾಲಿಕ ಚುನಾವಣೆ ಪದ್ಧತಿ ಜಾರಿಗಳಿಸಲು ಅನುಕೂಲವಾಗಲಿದೆ

ಎಂದು ಆಯೋಗ ಶಿಫಾರಸು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

2024ಕ್ಕೆ ಇದರ ಅನುಷ್ಠಾನ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕಿದ್ದು, ಮೂಲಗಳ ಪ್ರಕಾರ ಆಯೋಗವು ಬುಧವಾರ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸುವ ಸಾಧ್ಯತೆಯಿದೆ. ನಂತರ ಸರ್ಕಾರ

ಈ ವರದಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ (Ramanatha Kovind) ನೇತೃತ್ವದ ವಿಶೇಷ ಸಮಿತಿಗೆ ಸಲ್ಲಿಸಲಿದೆ.

ಕೇಂದ್ರ ಸರ್ಕಾರ ಕೋವಿಂದ್‌ ನೇತೃತ್ವದಲ್ಲಿ ಒಂದು ದೇಶ-ಒಂದು ಚುನಾವಣೆ ಅನುಷ್ಠಾನ ಸಾಧ್ಯತೆ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸಿದ್ದು, ಕಳೆದ ಶನಿವಾರವಷ್ಟೇ ಈ ಸಮಿತಿ ತನ್ನ ಮೊದಲ ಸಭೆ

ನಡೆಸಿ ಚರ್ಚಿಸಿತ್ತು. ಕಾನೂನು ಆಯೋಗದ ವರದಿಯನ್ನು ಈ ಸಮಿತಿಯು ಮತ್ತಷ್ಟು ಪರಿಶೀಲನೆ ನಡೆಸಿ ಬಳಿಕ ಸರ್ಕಾರಕ್ಕೆ ತನ್ನ ಶಿಫಾರಸನ್ನು ತಿಳಿಸಲಿದೆ.

ಕಳೆದ ಫೆಬ್ರವರಿಯಿಂದಲೇ ನ್ಯಾಯಮೂರ್ತಿ ರಿತು ರಾಜ್‌ ಅವಸ್ತಿ (Ritu Raj Awasthi) ನೇತೃತ್ವದ ಕಾನೂನು ಆಯೋಗವು ಈ ವಿಚಾರವಾಗಿ ಕೆಲಸ ಆರಂಭಿಸಿತ್ತು. ವಿವಿಧ ರಾಜಕೀಯ ಪಕ್ಷಗಳು,

ಅಧಿಕಾರಿಗಳು, ಶಿಕ್ಷಣ ಮತ್ತು ರಾಜಕೀಯ ತಜ್ಞರೊಂದಿಗೆ ಆಯೋಗವು ವ್ಯಾಪಕ ಸಮಾಲೋಚನೆಗಳನ್ನು ನಡೆಸಿದೆ. ಈ ವಿಧಾನದ ಬಗ್ಗೆ ಎಲ್ಲಾ ಪಕ್ಷಗಳು ಒಮ್ಮತ ವ್ಯಕ್ತಪಡಿಸಿವೆ ಎಂದು ಹೇಳಲಾಗದು

ಎಂದು ಕಾನೂನು ಆಯೋಗದ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ನ್ಯಾಯಮೂರ್ತಿ ಬಿ.ಎಸ್‌. ಚೌಹಾಣ್‌ (B S Chouhan) ನೇತೃತ್ವದ ಈ ಹಿಂದಿನ ಕಾನೂನು ಆಯೋಗವು ಒಂದು ದೇಶ ಒಂದು ಚುನಾವಣೆ ಬಗ್ಗೆ ತನ್ನ ಕರಡು ವರದಿಯಲ್ಲಿ ಮಾಡಿದ್ದ ಅನೇಕ ಶಿಫಾರಸುಗಳನ್ನು

22ನೇ ಕಾನೂನು ಆಯೋಗ ಪರಿಗಣಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದು, 2018ರಲ್ಲಿ ಚೌಹಾಣ್‌ ನೇತೃತ್ವದ ಆಯೋಗ ಸರಕಾರಕ್ಕೆ ಈ ಸಂಬಂಧ ವರದಿ ಸಲ್ಲಿಸಿತ್ತು. ಮುಂದಿನ 5 ವರ್ಷ ಸಮಕಾಲಿಕ

(ಸಿಂಕ್ರೊನೈಜ್ಡ್‌) ಚುನಾವಣೆಗೆ ಒತ್ತು ನೀಡಬೇಕು ಎಂದು ಶಿಫಾರಸು ಮಾಡಲಾಗಿತ್ತು.

ಕೆಲವೊಂದು ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳನ್ನು ಮುಂದೂಡುವ ಸಲಹೆ ನೀಡಿದ್ದು, ವಿಧಾನಸಭೆಗಳ ಅಧಿಕಾರಾವಧಿ ವಿಸ್ತರಿಸಲು ಸಾಂವಿಧಾನಿಕ ತಿದ್ದುಪಡಿಗೆ ಮಾಡುವಂತೆಯೂ ಸೂಚಿಸಿತ್ತು.

ಒಂದು ವೇಳೆ ಏಕಕಾಲಿಕ ಚುನಾವಣೆ ಸಾಧ್ಯವಾಗದಿದ್ದರೆ ಒಂದು ವರ್ಷದಲ್ಲಿ ಇರುವಂತಹ ಎಲ್ಲಾ ಚುನಾವಣೆಗಳನ್ನು ಒಂದು ಬಾರಿ ನಡೆಸಬೇಕು. ಇದಕ್ಕಾಗಿ 5 ಸಾಂವಿಧಾನಿಕ ತಿದ್ದುಪಡಿ ಮಾಡಬೇಕು ಎಂದು

ಸೂಚಿಸಲಾಗಿತ್ತು. ಇದೇ ರೀತಿಯಲ್ಲಿ ಈ ಬಾರಿಯು ಶಿಫಾರಸು ಸಲ್ಲಿಸಿದ್ದೇವೆ ಹಾಗೂ ಅಂತಿಮ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಅವರು ತಿಳಿಸಿದ್ದಾರೆ.

ಇದನ್ನು ಒದಿ: ತಮಿಳುನಾಡಿಗೆ ನೀರು ಬಿಡಬಾರದು ಎಂಬ ಬೇಡಿಕೆಯು ನಿರಂಕುಶ ಮತ್ತು ಸ್ವಾರ್ಥಿಯಾಗಿದೆ: ನಟ ಚೇತನ್

ಭವ್ಯಶ್ರೀ ಆರ್.ಜೆ

Exit mobile version