ಆಕ್ಸಿಜನ್ ಕೊರತೆಯಿಂದ ಸತ್ತವರು ಮೂರು ಜನ ಮಾತ್ರ: ಸಚಿವ ಸುಧಾಕರ್‌

ಚಾಮರಾಜನಗರ, ಮೇ. 04: ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೂವರು ಸೋಂಕಿತರು ಮಾತ್ರ ಮೃತಪಟ್ಟಿದ್ದು, ಉಳಿದವರು ಕೋವಿಡ್‌ನಿಂದ ಸಹಜವಾಗಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದರು.

ಘಟನೆ ಕುರಿತು ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇಂದು ಸಂಭವಿಸಿದ ಘಟನೆ ದುಃಖಕರವಾದುದು. ಮೃತರ ಕುಟುಂಬಗಳ ಜೊತೆ ರಾಜ್ಯ ಸರ್ಕಾರ ಇದೆ. ಈಗಾಗಲೇ ಸಿಎಂ ತನಿಖೆಗೆ ಆದೇಶಿಸಿದ್ದಾರೆ. ನ್ಯಾಯಸಮ್ಮತ ತನಿಖೆ ಆಗಲಿ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 123 ಸೋಂಕಿತರು ದಾಖಲಾಗಿದ್ದಾರೆ. ವೆಂಟಿಲೇಟರ್‌ನಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ 14 ಜನ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಕೊವಿಡ್ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 12ರಿಂದ 3 ಗಂಟೆವರೆಗೆ ಮೂವರು ಮೃತಪಟ್ಟಿದ್ದಾರೆ. ಮುಂಜಾನೆ 3ರಿಂದ 7 ಗಂಟೆಯವರೆಗೆ 7 ಜನ ಸಾವಿಗೀಡಾಗಿದ್ದು, 24 ಗಂಟೆಯಲ್ಲಿ 23 ಜನರು ಮೃತಪಟ್ಟಿದ್ದಾರೆ. ನಮಗೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಮೃತಪಟ್ಟಿದ್ದಾರೆ’ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಆಸ್ಪತ್ರೆಗೆ ಬಂದ ಪ್ರತಿಯೊಬ್ಬರೂ ಗುಣಮುಖರಾಗಿ ಹೋಗಬೇಕು. ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದರೂ ದುರಂತ ನಡೆದಿದೆ. ದುರಂತ ಸಂಭವಿಸಿದ್ದಕ್ಕೆ ವಿಷಾದಿಸುತ್ತೇವೆ. ಘಟನೆ ಬಗ್ಗೆ ತನಿಖೆ ನಡೆಸಿ 3 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

Exit mobile version