ಮೈಸೂರು ದಸರಾದಲ್ಲಿ ಉರ್ದು ಕವಿಗೋಷ್ಠಿ ; ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ

Mysore: ವಿಶ್ವವಿಖ್ಯಾತ ಮೈಸೂರು (Mysore) ದಸರಾದಲ್ಲಿ ಉರ್ದು (Urdu) ಕವಿಗೋಷ್ಠಿ ಆಯೋಜನೆ ಮಾಡಿರುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಕ್ಟೋಬರ್ (October) 15 ರಿಂದ 24 ರವರೆಗೆ ಮೈಸೂರು ದಸರಾ ನಡೆಯುತ್ತಿದ್ದು, ಇದರ ನಡುವೆ ದಸರಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಉರ್ದು ಕವಿಗೋಷ್ಠಿ ಆಯೋಜಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಕ್ರಮದ ವಿರುದ್ದ ಕಿಡಿಕಾರಿರುವ ಮಾಜಿ ಸಚಿವ ವಿ ಸುನಿಲ್ ಕುಮಾರ್ (V Sunil Kumar), ನಾಡಹಬ್ಬ ದಸರಾದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ ಆಯೋಜಿಸಿದೆ. ಕನ್ನಡದ ಶ್ರೀಮಂತ ಸಂಸ್ಕ್ರತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ದಸರಾದಲ್ಲಿ ಉರ್ದು ಹೇರಿಕೆ ಏಕೆ? ತನ್ನ ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ (Congress) ಕನ್ನಡದ ಮೇಲೆ ಉರ್ದು ಹೇರುತ್ತಿದೆ. ಟಿಪ್ಪು ನಿಜಗನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ.

ಮಹಿಷ ದಸರಾ, ಉರ್ದು ಕವಿಗೋಷ್ಠಿ ಜತೆಗೆ ಇನ್ನೆಷ್ಟು ಸಾಂಸ್ಕ್ರತಿಕ ದೌರ್ಜನ್ಯಕ್ಕೆ ನಿಮ್ಮ ಸಹಮತ? ದಸರಾದಲ್ಲಿ ನಾಡದೇವಿ ಚಾಮುಂಡಿ ಹಾಗೂ ಮೈಸೂರು ಒಡೆಯರ್ (Wadiyar) ಅವರ ವೈಭವವಾಗಬೇಕೇ ವಿನಾ ಟಿಪ್ಪು ಸಂಸ್ಕ್ರತಿಯಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವಿಚಾರದಲ್ಲಿ ಸೂಕ್ಷ್ಮತೆ ಹಾಗೂ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತಿದೆ. ವರ್ಷಪೂರ್ತಿ ಕರ್ನಾಟಕ (Karnataka) ಸಂಭ್ರಮ ಆಚರಿಸಲು ಹೊರಟವರು ದಸರಾದಲ್ಲಿ ಉರ್ದು ಸಂಭ್ರಮ ನಡೆಸಿದರೆ ಹೇಗೆ? ಎಂದು ಸುನಿಲ್ ಕುಮಾರ್ (Sunil Kumar) ಪ್ರಶ್ನಿಸಿದ್ದಾರೆ.

ಅಕ್ಟೋಬರ್ 19ಕ್ಕೆ ಉರ್ದು ಕವಿಗೋಷ್ಠಿ :

ಅಕ್ಟೋಬರ್ 19 ಸಂಜೆ 7 ಗಂಟೆಗೆ ಉರ್ದು ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು, ಕ್ಲಾಸಿಕ್ ಕನ್ವೆನ್ಷನ್ ಹಾಲ್ನಲ್ಲಿ (Classic Convention Hall) ಉರ್ದು ಕವಿಗೋಷ್ಠಿ ನಡೆಯಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ (H C Mahadevappa) ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಆದರೆ, ಉರ್ದು ಸುದ್ದಿಗೋಷ್ಠಿಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಸರ್ಕಾರ ಮುಂದಿನ ನಿರ್ಧಾರ ಏನು ತೆಗೆದುಕೊಳ್ಳುತ್ತದೆ ಕಾದು ನೋಡಬೇಕು. ಕನ್ನಡಪರ ಸಂಘಟನೆಗಳು ಕೂಡಾ ಉರ್ದು ಕವಿಗೋಷ್ಠಿ ನಡೆಸಿದರೆ, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

Exit mobile version