ಮೂರನೇ ದಿನ 40 ಸಾವಿರಕ್ಕಿಂತ ಕಡಿಮೆ ಹೊಸ ಪ್ರಕರಣ ದಾಖಲು: 447 ಸಾವು

ನವದೆಹಲಿ, ಆ. 09: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 35,499 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 447 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ಸತತ ಮೂರು ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 40 ಸಾವಿರಕ್ಕಿಂತ ಕಡಿಮೆ ವರದಿಯಾಗಿದೆ. ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ 9ರಷ್ಟು ಇಳಿಕೆಯಾಗಿದೆ. ದೇಶದಲ್ಲಿ ಈವರೆಗೆ 3,19,69,954 ಮಂದಿ ಸೋಂಕಿತರಾಗಿದ್ದು, 4,28,309 ಜನ ಮೃತಪಟ್ಟಿದ್ದಾರೆ. 3,11,39,457 ಸೊಂಕಿತರು ಗುಣಮುಖರಾಗಿದ್ದಾರೆ.

ಸದ್ಯ 4,02,188 ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ ಶೇ 1.26ರಷ್ಟಾಗಿದೆ. ಚೇತರಿಕೆ ಪ್ರಮಾಣ ಶೇ 97.40ಗೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 2.59ರಷ್ಟಿದ್ದು, ವಾರದ ಪಾಸಿಟಿವಿಟಿ ಪ್ರಮಾಣ ಶೇ 2.35ರಷ್ಟಿದೆ. ದೇಶದಾದ್ಯಂತ ಈವರೆಗೆ 50.86 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

Exit mobile version