ಹಿರಿಯ ನಟ ಅನಂತ್ ​ನಾಗ್​ಗೆ ಪದ್ಮ ಪ್ರಶಸ್ತಿ ನೀಡಿ; ಚಿತ್ರರಂಗದ ಸೆಲೆಬ್ರಿಟಿಗಳಿಂದ ಟ್ವಿಟ್ಟರ್​ ಅಭಿಯಾನ ಆರಂಭ

ಬೆಂಗಳೂರು, ಜು. 13: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರಿಗೆ ‘ಪದ್ಮ ಪ್ರಶಸ್ತಿ’ ನೀಡಬೇಕೆಂದು ಒತ್ತಾಯಿಸಿ #AnanthnagForPadma ಎಂಬ ಹ್ಯಾಷ್​ಟ್ಯಾಗ್​ನಡಿ ಟ್ವಿಟ್ಟರ್​ನಲ್ಲಿ ಅಭಿಯಾನ ಆರಂಭಗೊಂಡಿದೆ.

ಈ ವರ್ಷದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ಜನರೇ ತಮ್ಮ ನಡುವಿನ ಸಾಧಕರ ಹೆಸರನ್ನು ಶಿಫಾರಸು ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ #PeoplesPadma ಹ್ಯಾಷ್​ಟ್ಯಾಗ್​ನಡಿ ಅಭಿಯಾನವೊಂದು ಆರಂಭವಾಗಿದೆ. ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. 

ದೇಶದ ಅತ್ಯುನ್ನತ ಗೌರವಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಜನತೆಗೆ ಕರೆನೀಡಿದ್ದಾರೆ. ಚಿತ್ರರಂಗದ ಮಹಾನ್ ಪ್ರತಿಭೆಗಳಲ್ಲಿ ಒಬ್ಬರಾದ ಅನಂತ್​ನಾಗ್ ಅವರು ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸೋಣ. ಕನ್ನಡನಾಡಿನ ಪರವಾಗಿ ಅನಂತ್​ನಾಗ್ ಅವರನ್ನು #PeoplesPadma ಪ್ರಶಸ್ತಿಗೆ ನಾಮನಿರ್ದೇಶನ ಮಾಡೋಣ ಎಂದು ಈ ಕುರಿತು ಟ್ವಿಟ್ಟರ್​ನಲ್ಲಿ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ಈ ಅಭಿಯಾನಕ್ಕೆ ಕೈ ಜೋಡಿಸಿರುವ ನಟ‌ ರಕ್ಷಿತ್‌ಶೆಟ್ಟಿ,
ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಅನಂತ ನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ ಎಂದು ಟ್ವೀಟ್ ಮಾಡುವ ಮೂಲಕ ಅಭಿಯಾನಕ್ಕೆ ಸಾಥ್ ನೀಡುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

Exit mobile version