ಪಾಸ್ ಪೋರ್ಟ್ ಪಡೆಯಲು ಇನ್ನು ಮೂಲ ದಾಖಲೆ ಪ್ರದರ್ಶಿಸುವ ಅಗತ್ಯವಿಲ್ಲ : ಮಹತ್ವದ ಬದಲಾವಣೆ

ದೆಹಲಿ,ಫೆ.20: ಪಾಸ್ ಪೋರ್ಟ್ ಸೇವಾ ಕಾರ್ಯಕ್ರಮಕ್ಕೆ ಡಿಜಿ ಲಾಕರ್ ವೇದಿಕೆ ಯನ್ನು ವಿದೇಶಾಂಗ ಸಚಿವಾಲಯ ಆರಂಭಿಸಿದೆ. ಈ ಸೌಲಭ್ಯದ ಪರಿಚಯದೊಂದಿಗೆ, ಪಾಸ್ ಪೋರ್ಟ್ ಪಡೆಯುವವರು ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲಾ ಮೂಲ ದಾಖಲೆಗಳನ್ನು ಪ್ರದರ್ಶಿಸುವ ಅಗತ್ಯವಿರುವುದಿಲ್ಲ. ಡಿಜಿ ಲಾಕರ್ ಪ್ರೋಗ್ರಾಂ ಮೂಲಕ ಇಡೀ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಪ್ರಕಾರ, ಪಾಸ್ ಪೋರ್ಟ್ ಸೇವಾ ಕಾರ್ಯಕ್ರಮವು ದೇಶದಲ್ಲಿ ಪಾಸ್ ಪೋರ್ಟ್ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆಯಾಗಿದೆ. ಇದರಿಂದ ಪಾಸ್ ಪೋರ್ಟ್ ಪಡೆಯುವವರಿಗೆ ಉತ್ತಮ ಸೌಲಭ್ಯ ಸಿಗಲಿದೆ. ವಿದೇಶಾಂಗ ಸಚಿವಾಲಯದ ಪ್ರಕಾರ, ಪಾಸ್ ಪೋರ್ಟ್ ಪಡೆಯುವವರ ಸಂಖ್ಯೆ ಕಳೆದ ಆರು ವರ್ಷಗಳಲ್ಲಿ ಹೆಚ್ಚಾಗಿದೆ. ಪಾಸ್ ಪೋರ್ಟ್ ಪಡೆಯುವವರ ಸಂಖ್ಯೆ ಪ್ರತಿ ತಿಂಗಳು ಹೆಚ್ಚುತ್ತಲೇ ಇದೆ. 2017ರಲ್ಲಿ ಮೊದಲ ಬಾರಿಗೆ ಒಂದು ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಾಗರಿಕರಿಗೆ ಅನುಕೂಲವಾಗಲೆಂದು ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಒಂದೆಡೆ ಪಾಸ್ ಪೋರ್ಟ್ ನಿಯಮಗಳನ್ನು ಸರಳೀಕರಣಗೊಳಿಸಿ, ಮತ್ತೊಂದೆಡೆ ಅವರ ಮನೆ ಬಳಿ ಪಾಸ್ ಪೋರ್ಟ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ಅಂಚೆ ಕಚೇರಿಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಆರಂಭಿಸಲಾಗಿದೆ.

ಅಂಕಿ ಅಂಶಗಳ ಪ್ರಕಾರ, 426 ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ (POPSK) ಕಾರ್ಯಾರಂಭ ಮಾಡಲಾಗಿದ್ದು, ಇನ್ನೂ ಹಲವು ಶೀಘ್ರದಲ್ಲೇ ಬರಲಿವೆ. ಪ್ರಸ್ತುತ 426 ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳಿಂದ 36 ಪಾಸ್ ಪೋರ್ಟ್ ಕಚೇರಿಗಳು ಹಾಗೂ 93 ಅಸ್ತಿತ್ವದಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳಿಂದ ಪಾಸ್ ಪೋರ್ಟ್ ಗಳನ್ನು ರಚಿಸಲಾಗುತ್ತಿದೆ.

ಈ ಮೂಲಕ ದೇಶದಲ್ಲಿ ಒಟ್ಟು 555 ಸ್ಥಳಗಳಿಂದ ಪಾಸ್ ಪೋರ್ಟ್ ಗಳನ್ನು ತಯಾರಿಸಲಾಗುತ್ತಿದೆ. ಕರೋನಾ ಅವಧಿಯಲ್ಲಿ ನಾಗರಿಕರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶದಲ್ಲಿ ಇ-ಪಾಸ್ ಪೋರ್ಟ್ ಗಳನ್ನು ತಯಾರಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಇ-ಪಾಸ್ ಪೋರ್ಟ್ ಸೌಲಭ್ಯ ಶೀಘ್ರದಲ್ಲೇ ಜಾರಿಗೆ ಬರಲಿದೆ.

ಇದರ ಜೊತೆಗೆ ಇ-ಪಾಸ್ ಪೋರ್ಟ್ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು. ಡಿಜಿಟಲ್ ಇಂಡಿಯಾ ಮಿಷನ್ ಅಡಿಯಲ್ಲಿ ಪ್ರತಿಯೊಂದು ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದ್ದು, ಜನರು ಮನೆಯಲ್ಲಿ ಕುಳಿತುಕೊಂಡು ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

Exit mobile version