ಜೀವನಪೂರ್ತಿ ನಿದ್ರೆಯನ್ನು ಮಾಡದೆ ಎಚ್ಚರವಾಗಿಯೇ ಬದುಕಿದ್ದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ!

Paul kern

ಒಬ್ಬ ವ್ಯಕ್ತಿ ಆರೋಗ್ಯವಾಗಿರೋಕೆ ಏನು ಬೇಕು? ದಿನಕ್ಕೆ ಮೂರು ಹೊತ್ತು ಊಟ ಮತ್ತು 6 ರಿಂದ 8 ಘಂಟೆ ನಿದ್ದೆ ಅಲ್ವಾ? ಆಹಾರವಿಲ್ಲದೇ ಕೇವಲ ನೀರು ಕುಡಿದು ಸುಮಾರು ಆರು ದಿನ ಕಷ್ಟಪಟ್ಟು ಬದುಕಿರಬಹುದಂತೆ.

ನೀರೂ ಇಲ್ಲದೇ ಮೂರು ದಿನ ಬದುಕಿರಬಹುದಂತೆ. ಆದರೆ ಒಂದು ಕ್ಷಣವೂ ನಿದ್ದೆ ಇಲ್ಲದೇ ಎರಡು ದಿನಕ್ಕಿಂತ ಹೆಚ್ಚು ಕಾಲ ಬದುಕಿ ಇರಲು ಸಾಧ್ಯವಿಲ್ಲ ಅನ್ನೋದು ಸಂಶೋಧನೆಗಳ ಮೂಲಕ ಧೃಡಪಟ್ಟಿದೆ. ಆದರೆ ಒಂದು ವಿಚಿತ್ರ ಕಾರಣದಿಂದ ಓರ್ವ ವ್ಯಕ್ತಿ ನಿದ್ದೆ ಮಾಡುವ ಶಕ್ತಿಯನ್ನೇ ಕಳೆದುಕೊಂಡು ನಲವತ್ತು ವರ್ಷ ಕಾಲ ಜೀವಿಸಿದ್ದ ಸಂಗತಿ ಬೆಳಕಿಗೆ ಬಂದಿದೆ! ಹೌದು, ಆಶ್ಚರ್ಯವಾದ್ರೂ ಇದು ನಿಜ.
ಪೌಲ್ ಕರ್ನ್ ಅನ್ನೋ ಹೆಸರಿನ ಒಬ್ಬ ವ್ಯಕ್ತಿ ಇಂತಹ ಅಚ್ಚರಿಯ ಮೂಲಕ ಹೆಸರುವಾಸಿಯಾಗಿದ್ದಾರೆ. ಹಂಗರಿ ದೇಶದ ನಾಗರಿಕರಾಗಿದ್ದ ಇವರು ಮೊದಲ ಮಹಾಯುದ್ಧದ ಸಮಯದಲ್ಲಿ ಯುದ್ಧದಲ್ಲಿ ಭಾಗವಹಿಸಿದ್ದ ಅಧಿಕಾರಿಯಾಗಿದ್ದರು.

1915 ರಲ್ಲಿ ಪೂರ್ವ ರಾಷ್ಟ್ರಗಳ ಪರವಾಗಿ ಯುದ್ಧದಲ್ಲಿ ಭಾಗವಹಿಸಿದ್ದ ಸರ್ಕಾರಿ ಅಧಿಕಾರಿ ಇವ್ರು. ಒಂದು ದಿನ ರಷ್ಯನ್ ಯೋಧನೊಬ್ಬ ಹಾರಿಸಿದ ಗುಂಡು ನೇರವಾಗಿ ಇವರ ತಲೆಗೆ ಹೊಕ್ಕಿತ್ತು. ಗುಂಡು ತಲೆಬುರುಡೆಯ ಮುಂಭಾಗ ಅಂದ್ರೆ ಕ್ರೇನಿಯಂ ಭಾಗವನ್ನು ಹಾದು ಮೆದುಳಿನ ಪ್ರಮುಖ ಭಾಗವನ್ನೇ ಹಾನಿಗೊಳಿಸಿತ್ತು. ತಕ್ಷಣ ಇವರನ್ನು ಆಸ್ಪತ್ರೆಗೆ ಸಾಗಿಸಿ ಶಸ್ತ್ರಚಿಕಿತ್ಸೆಯ ಮೂಲಕ ಗುಂಡನ್ನು ತೆಗೆಯಲಾಯಿತು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇವರಿಗೆ ಕೆಲವು ದಿನಗಳ ನಂತರ ಪ್ರಜ್ಞೆ ಮರಳಿತು. ಸ್ವಲ್ಪ ದಿನಗಳ ವಿಶ್ರಾಂತಿಯ ಬಳಿಕ ಮನೆಗೆ ತೆರಳಲು ವೈದ್ಯರು ತಿಳಿಸಿದರು. ಆದರೆ ಮೊದಲ ಕೆಲವು ದಿನ ನಿದ್ದೆಯೇ ಬರಲಿಲ್ಲ. ದಿನಗಳು ವಾರಗಳು ಕಳೆದರೂ ನಿದ್ದೆಯ ಸುಳಿವೇ ಇಲ್ಲ.

ಆ ದಿನದಿಂದ ಅವರು ವಯೋಸಹಜವಾಗಿ 1955ರಲ್ಲಿ ನಿಧನರಾಗುವ ತನಕ ಒಂದೇ ಒಂದು ದಿನ ನಿದ್ದೆಯನ್ನೇ ಮಾಡಿಲ್ಲ. ಇವರಿಗೆ ಈ ರೀತಿ ನಿದ್ದೆ ಕಣ್ಮರೆಯಾಗಲು ಕಾರಣವೇನು ಅನ್ನೋದನ್ನ ಸಂಶೋಧನೆ ಮಾಡಲು ಪ್ರಯತ್ನಿಸಿದ ವಿಶ್ವದ ಹಲವಾರು ಪ್ರಖ್ಯಾತ ವೈದ್ಯರಿಗೆ ಇವರೊಂದು ಬಿಡಿಸಲಾರದ ಕಗ್ಗಂಟಾದರು. ಇನ್ನೊಂದು ಇಂಟೆರೆಸ್ಟಿಂಗ್ ವಿಷಯ ಅಂದ್ರೆ, ನಮಗೆಲ್ಲಾ ಇಡೀ ದಿನದ ಕೆಲಸ ಮುಗಿಸಿ ಸುಸ್ತಾಗಿ ಹಾಸಿಗೆ ಸಿಕ್ಕರೆ ಸಾಕಾಗಿರುತ್ತದೆ. ಆದರೆ ಇವರಿಗೆ ಹಾಸಿಗೆಯಲ್ಲಿ ಮಲಗೋದೇ ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತಂತೆ.

ನಿದ್ದೆ ಬರಲಿ ಅಂತ ಕಣ್ಣು ಮುಚ್ಚಿ ಪ್ರಯತ್ನಿಸಿದ್ರೆ ಇವರಿಗೆ ಬಹಳ ಸುಸ್ತು ಉಂಟಾಗ್ತಿತ್ತಂತೆ. ಹಾಸಿಗೆಯಲ್ಲಿ ಮೈ ಚೆಲ್ಲಿದ ಬಳಿಕ ಸುಸ್ತು ಆವರಿಸತೊಡಗುತ್ತಿತ್ತು. ಆದರೆ ಎಚ್ಚರದಿಂದ ನಡೆದಾಡುತ್ತಾ ಇದ್ದರೆ ಏನೂ ತೊಂದರೆ ಆಗ್ತಿರ್ಲಿಲ್ಲ. ಒಂದು ಸಂಶೋಧನೆಯಲ್ಲಿ ಇವರನ್ನು ಹೇಗಾದರೂ ಮಲಗಿಸಲೇಬೇಕೆಂದು ಬಹಳ ಪ್ರಯತ್ನಿಸಿದ ನಂತರ, ಕೇವಲ ಎರಡು ಗಂಟೆಗಳ ಕಾಲ ಕಣ್ಣುಮುಚ್ಚಿ ಮಲಗಿಸಲು ಸಾಧ್ಯವಾಯಿತು. ಆದರೂ ಇವರ ಮೆದುಳು ಮಾತ್ರ ಎಚ್ಚರವಾಗಿಯೇ ಇತ್ತಂತೆ, ಎಲ್ಲಾ ವಿಷಯಗಳನ್ನು ಗ್ರಹಿಸುತ್ತಿತ್ತು.

ಹೀಗೆ ಅವರು ತಮ್ಮ ಮುಂದಿನ ಜೀವಿತಾವಧಿಯನ್ನು ಮಲಗದೇ ಚಟುವಟಿಕೆಯಿಂದಿದ್ದೇ ಕಳೆದರು. ಆದರೆ ಇಷ್ಟು ದೀರ್ಘ ಕಾಲ ನಿದ್ದೆಯಿಲ್ಲದೇ ಹೇಗೆ ಬದುಕಿದ್ದರು ಅನ್ನೋದು ಮಾತ್ರ ಇಂದಿಗೂ ರಹಸ್ಯವಾಗಿಯೇ ಉಳಿದಿದೆ!

Exit mobile version