ಪಿಡಿಓ, ಈಓ ಹಣವಂತರ ಏಜೆಂಟರಾಗಿದ್ದಾರೆ! ಬರೀ ದಲ್ಲಾಳಿತನ ಮಾಡಿ ಬಡವರ ರಕ್ತ ಹೀರುತ್ತಿದ್ದಾರೆ. ಪಂಚಾಯತಿಯ ಕರ್ಮಕಾಂಡ ಬಯಲು

PDO, EO has become rich persons agents. They are looting poor people | Vijayatime

ಇದು ಪಂಚಾಯತಿಯೊಂದರಲ್ಲಿ ನಡೆಯುತ್ತಿರುವ ವಾಗ್ಯುದ್ಧ. ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ನೊಂದು ಬೆಂದ ಗ್ರಾಮಸ್ಥರು ಮಾಧ್ಯಮದವರೊಂದಿಗೆ  ಪಂಚಾಯಿತಿಗೆ ನುಗ್ಗಿ ನ್ಯಾಯ ಕೇಳುತ್ತಿರುವ ಪರಿ.

ಇತ್ತೀಚಿನ ದಿನಗಳಲ್ಲಿ ಪಂಚಾಯತಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಪಂಚಾಯಿತ ಸದಸ್ಯರು, ಪಿಡಿಓ, ಇತರೆ ಸಿಬ್ಬಂದಿ ಹಣವಂತರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇದರಿಂದ ಆಕ್ರೋಶಿತರಾಗಿರೋ ಗ್ರಾಮದ ನಿವಾಸಿಗಳು ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಜನರಿಗೆ ಸೇರಬೇಕಾದ ಯೋಜನೆಗಳು ಭ್ರಷ್ಟರ ಪಾಲಾಗುತ್ತಿದೆ. ನಕಲಿ ಬಿಲ್‌ಗೋಲ್‌ಮಾಲ್‌ ರಾಜಾರೋಷವಾಗಿ ನಡೀತಿದೆ, ಅದಕ್ಕಿಂತಲೂ ಮಿಗಿಲಾಗಿ ದುಷ್ಟರ ಕಣ್ಣು ಬಡವರ ಭೂಮಿ ಮೇಲೆ ಬೀಳುತ್ತಿದೆ ಇದು ಜನರಲ್ಲಿ ಕೋಪ ಉಕ್ಕುವಂತೆ ಮಾಡುತ್ತಿದೆ.

ಇಂಥಹುದೇ ಭಾರೀ ಹಗರಣ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಮಂಚನಾಯಕಹಳ್ಳಿ ಪಂಚಾಯತಿಯಲ್ಲಿ ನಡೆಯುತ್ತಿದೆ ಅಂತ ಸ್ಥಳೀಯರು ಆರೋಪಿಸಿ ಪಂಚಾಯತಿ ಸಿಬ್ಬಂದಿಯಿಂದ ನ್ಯಾಯ ಕೇಳಲು ಮುಂದಾದಾಗ ನಡೆದ ವಾಗ್ವಾದ ಇದು.

ಯಸ್‌, ಇದು ಇಲ್ಲಿನ ಗ್ರಾಮಸ್ಥರು ಪಂಚಾಯತ್‌ ಅಧ್ಯಕ್ಷರಲ್ಲಿ ಕೇಳುತ್ತಿರುವ ಪ್ರಶ್ನೆ. ಮಂಚನಾಯಕನಹಳ್ಳಿ ಪಂಚಾಯತ್‌ ಭ್ರಷ್ಟಾಚಾರದ ಕೂಪವಾಗಿದೆ. ಈ ಪಂಚಾಯತ್‌ ಪಿಡಿಓ ಹಾಗೂ ಇತರ ಸದಸ್ಯರು ಸೇರಿಕೊಂಡು ಪಂಚಾಯತ್‌ ಹಣವನ್ನು ಲೂಟಿ ಮಾಡ್ತಿದ್ದಾರೆ ಅನ್ನೋದು ಸ್ಥಳೀಯರ ಆರೋಪ.

ಈ ಮಂಚೇನಹಳ್ಳಿ ಗ್ರಾಮಪಂಚಾಯತಿಯಲ್ಲಿ ಅಕ್ರಮ ಭೂವ್ಯವಹಾರಗಳು ಭರ್ಜರಿಯಾಗಿ ನಡೆಯುತ್ತಿವೆ. ಬಡ ರೈತರ ಜಮೀನನ್ನು ಕಾನೂನು ಬಾಹಿರವಾಗಿ ಹಣವಂತರಿಗೆ ನೀಡುವ ದೊಡ್ಡ ದಂಧೆ ನಡೆಯುತ್ತಿದೆ. ಇದರಿಂದ ಅಮಾಯಕ, ಅನಕ್ಷರಸ್ಥ ರೈತರ ಜಮೀನು ಅನ್ಯಾಯವಾಗಿ ಅನ್ಯರ ಪಾಲಾಗುತ್ತಿದೆ ಅನ್ನೋದು ನೊಂದವರ ದೂರು.

ಹೌದು,ಈ ಪಂಚಾಯಿತಿಯಲ್ಲಿ ಹಕ್ಕು ಪತ್ರ ಇಲ್ಲದೆಯೇ ಖಾತೆಯಾಗುತ್ತೆ. ಅದೂ ಒಂದೆರೆಡೆ ಸೈಟ್‌ಗಳಲ್ಲ. ಬರೋಬ್ಬರಿ 16 ಸೈಟ್‌ಗಳ ಖಾತೆ ಮಾಡಿಕೊಟ್ಟಿದ್ದಾರೆ ಅಂತ ದಾಖಲೆ ಸಮೇತ ವಿವರಿಸ್ತಾರೆ ಇವರು.

ಈ ಅಕ್ರಮದ ಬಗ್ಗೆ ಮಾಹಿತಿ ಕೇಳಿದ್ರೆ ಮಾಹಿತಿ ಕೊಡಲ್ಲ. ಭ್ರಷ್ಟರ ವಿರುದ್ಧ ತಾಲ್ಲೂಕು ಪಂಚಾಯಿತಿ ಈಓ ಕ್ರಮಕೈಗೊಳ್ಳದಿಲ್ಲ. ಬದಲಾಗಿ ದೂರು ಕೊಟ್ಟವರಿಗೆ ಜೀವಬೆದರಿಕೆ ನೀಡಿ ಶೋಷಿಸುತ್ತಿದ್ದಾರೆ ಅನ್ನೋದು ಇವರ ಆರೋಪ.

ಅಷ್ಟು ಮಾತ್ರವಲ್ಲ ಯಾರೆಲ್ಲಾ ಪಂಚಾಯತ್‌ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೋ ಅವರ ಜಮೀನುನನ್ನು ವಶಕ್ಕೆ ಪಡೆಯುವ ಯತ್ನಗಳನ್ನ ಮಾಡಿದ್ದಾರೆ ಅಂತಾರೆ ಇವರು.

ಇನ್ನು ಇದೇ ಗ್ರಾಮ ಪಂಚಾಯತ್ ಅಡಿಯಲ್ಲಿ ಬಂದಿರುವ ಶ್ಯಾನ್‌ಮಂಗಲ ಹೋಬಳಿಯಲ್ಲಿ ಕೆಐಎಡಿಬಿಯವರು ಜಮೀನನ್ನು ವಶಪಡಿಸಿಕೊಂಡಿದ್ರು. ಇದಕ್ಕೆ ಪರ್ಯಾಯವಾಗಿ ಭೂಮಿ ಕಳೆದುಕೊಂಡವರಿಗೆ ಜಮೀನು ನೀಡುವಲ್ಲೂ ಭಾರೀ ಗೋಲ್‌ಮಾಲ್‌ ಮಾಡ್ತಿದ್ದಾರೆ ಅನ್ನೋ ನೇರ ಆರೋಪ ಇವರದ್ದು.

ಇನ್ನು ಸರ್ಕಾರಿ ಕೆಲಸಕ್ಕೆ ಜನರ ಜಮೀನು ಸ್ವಾಧೀನಪಡಿಸಿಕೊಂಡ್ರೂ ಅದನ್ನು ವಾಪಾಸ್‌ ಮಾಡಲು ಇಲ್ಲಿನ ಸಿಬ್ಬಂದಿ ಹಿಂದೇಟು ಹಾಕಿ ಜನರ ಶೋಷಣೆ ಮಾಡ್ತಿದ್ದಾರೆ. ಇಷ್ಟು ಮಾತ್ರವಲ್ಲ ಇಲ್ಲಿ ತೆರಿಗೆ ವಸೂಲಿಯೂ ವಿಚಿತ್ರವಾಗಿ ನಡೆಯುತ್ತೆ. ವರ್ಷಕ್ಕೆ ಹದಿನೆಂಟು ಸಾವಿರ ರೂಪಾಯಿ ಸಂಗ್ರಹಿಸಿದ ಉದಾಹರಣೆಯೂ ಇದೆ.

ಈ ಗ್ರಾಮಪಂಚಾಯತಿಯಲ್ಲಿ ಬಿಲ್‌ಗೋಲ್‌ಮಾಲ್‌ಗಳು ಭರ್ಜರಿಯಾಗಿ ನಡೆಯುತ್ತಿದೆ. ಜನರ ತೆರಿಗೆ ಹಣವನ್ನು ನುಂಗುವ ಸ್ಕೀಮನ್ನು ಪಂಚಾಯತ್ ಸಿಬ್ಬಂದಿ ನೀಟಾಗಿ ಮಾಡ್ತಾರೆ ಅಂತಾರೆ ಗ್ರಾಮಸ್ಥರು. ರೈತರು ಪಂಚಾಯತ್‌ ಅಧಿಕಾರಿಗಳ ದುಂಡಾವರ್ತನೆಯಿಂದ ರೋಸಿ ಹೋಗಿದ್ರು. ಈ ಬಗ್ಗೆ ವಿಜಯಟೈಮ್ಸ್‌ಗೆ ದೂರು ನೀಡಿದ ಗ್ರಾಮಸ್ಥರು ನಮ್ಮನ್ನು ಗ್ರಾಮ ಪಂಚಾಯತ್‌ಗೆ ಕರೆದುಕೊಂಡು ಹೋದ್ರು. ನಾವು ನೇರಾನೇರವಾಗಿ ಪಂಚಾಯತ್‌ ಅಧ್ಯಕ್ಷ ಸತೀಶ್‌ ಕುಮಾರ್‌ ಹಾಗೂ ಪಿಡಿಓ ಶಿವಕುಮಾರ್‌ ಅವರ ಬಳಿ ಸ್ಪಷ್ಟನೆ ಕೇಳಿದ್ವಿ.

ಆಗ ಪಿಡಿಓ ಶಿವಕುಮಾರ್‌ ಗ್ರಾಮಸ್ಥರ ಕೇವಲ ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಿ ಜವಾಬ್ದಾರಿಯಿಂದ ನುಣುಚಿಕೊಂಡ್ರು. ಇನ್ನಷ್ಟು ವಿವರ ಕೇಳಿದಾಗ ಉತ್ತರಿಸಲಾಗದೆ ಅಲ್ಲಿಂದ ಕಾಲ್ಕಿತ್ತರು. ಗ್ರಾಮಸ್ಥರ ದೂರನ್ನು ಆಲಿಸಿದ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸತೀಶ್‌ ಕುಮಾರ್ ಅವರು ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ರು.

ಇದು ಈ ಒಂದು ಗ್ರಾಮಪಂಚಾಯತ್‌ ಕತೆಯಲ್ಲ. ನಮ್ಮ ರಾಜ್ಯದ ಹೆಚ್ಚಿನ ಗ್ರಾಮಪಂಚಾಯತಿಗಳು ಭ್ರಷ್ಟಾಚಾರದ ಕೂಪಗಳಾಗುತ್ತಿವೆ. ಆದ್ರೆ ಇಲ್ಲಿ ಗ್ರಾಮಸ್ಥರು ಜಾಗೃತರಾಗಿ ತಮ್ಮ ಮೇಲಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಇಲ್ಲದಿದ್ದರೆ ಭ್ರಷ್ಟರು ಬಡವರ ಸಮಾಧಿ  ಮೇಲೆ ಅರಮನೆ ಕಟ್ಟುವುದರಲ್ಲಿ ಅನುಮಾನವೇ ಇಲ್ಲ.

ರಾಮನಗರದಿಂದ ಜಗದೀಶ್‌, ಸುಹೇಬ್‌ ಖಾನ್‌ ವಿಜಯಟೈಮ್ಸ್

Exit mobile version