ಪೆಗಾಸಸ್ ಗೂಢಾಚರ್ಯೆ ಪ್ರಕರಣ: ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿಯುತ್ತಿವುದು ಅಪಾಯಕಾರಿ: ಎಚ್ಡಿಕೆ

ಬೆಂಗಳೂರು, ಜು. 21: ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಪೆಗಾಸಸ್ ಗೂಢಾಚರ್ಯೆ ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೆಗಾಸಿಸ್ ಗೂಢಾಚರ್ಯೆಯಲ್ಲಿ‌ ಕೇಂದ್ರ ಸರ್ಕಾರ ಸಿಲುಕಿಕೊಂಡಿದೆ. ಇದು ಮಾನವ ಹಕ್ಕು ಉಲ್ಲಂಘನೆಯಂಥ ಪ್ರಕರಣವಾದರೂ ಇತ್ತೀಚೆಗೆ ಕೇಂದ್ರ ಆದ್ಯತೆ ಮೇಲೆ ಗೂಢಚರ್ಯೆ ನಡೆಸುತ್ತಿರುವುದು ಗುಟ್ಟೇನಲ್ಲ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರ್ಕಾರ ಕೆಡವಿ, ಸರ್ಕಾರವನ್ನು ತರಲು ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳಲ್ಲಿ ಇದೂ ಒಂದಾಗಿದೆ.

ನನ್ನ ಮೇಲೆ ಗೂಢಚರ್ಯೆ ನಡೆಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕೊನೆಗೆ ನನ್ನ ಮೇಲೆ ಫೋನ್ ಕದ್ದಾಲಿಕೆ ಆರೋಪ ಮಾಡಿತು. ಸಿಬಿಐ ತನಿಖೆ ನಡೆಸಿತು. ಅದಾಗಲೇ ಅಪಮಾರ್ಗದಲ್ಲಿ ಹೆಜ್ಜೆ ಹಾಕಿದ್ದ ಬಿಜೆಪಿ, ನನ್ನ ಮೇಲಿನ ತನಿಖೆ ಮೂಲಕ ಆತ್ಮವಂಚನೆಯಿಂದ ನಡೆದುಕೊಂಡಿದೆ. ಅಧಿಕಾರಕ್ಕೆ ಏರಲು ಬಿಜೆಪಿ ಇಂತಹ ಕೀಳು ಮಟ್ಟಕ್ಕಿಳಿಯುತ್ತಿದ್ದು, ಇದು ಅಪಾಯಕಾರಿ.

ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಿರುವ ಬಿಜೆಪಿ ಮುಂದೊಂದು ದಿನ ಅಗತ್ಯಬಿದ್ದಾಗ ಜನರ ವೈಯಕ್ತಿಕ ಬದುಕಿನಲ್ಲಿ ಇಣುಕದು ಎಂಬುದಕ್ಕೆ ಖಚಿತತೆ ಇದೆಯೇ? ಅಂತ ದಿನ ದೂರವಿಲ್ಲ. ಬಿಜೆಪಿ ದಮನಕಾರಿ ನಡೆ ಈಗ ಮಾನವ ಹಕ್ಕುಗಳತ್ತ ಕೇಂದ್ರೀಕೃತವಾಗಿದೆ. ಬಿಜೆಪಿಯ ಇಂಥ ಕೃತ್ಯಗಳ ಬಗ್ಗೆ ಜನರು ಜಾಗೃತರಾಗಬೇಕು ಎ‌ಂದು ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Exit mobile version