ನಿರಂತರವಾಗಿ ಹರಿಯುತ್ತಿರುವ ಜೀವನ ಎನ್ನುವ ನದಿಯಲ್ಲಿ, ಮನುಷ್ಯ ತನ್ನನ್ನ ತಾನು ಅಭಿವೃದ್ಧಿಪಡಿಸಿಕೊಳ್ಳುತ್ತಾ, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾನೆ. ಈ ಆಧುನಿಕ ಯುಗದಲ್ಲಿ, “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಗಾದೆ ಮಾತನ್ನು “ಮೊಬೈಲ್ ಬಳಸದ ಜನರಿಲ್ಲ” ಎಂದು ಬದಲಾಯಿಸಿದರೆ ತಪ್ಪಾಗಲಾರದು.

ಮನುಷ್ಯನು ತನ್ನ ಅಸಾಮಾನ್ಯ ಬುದ್ದಿಮತ್ತೆಯಲ್ಲಿ ಉಳಿದೆಲ್ಲ ಜೀವರಾಶಿಗಳಿಗಿಂತ ಭಿನ್ನವಾಗಿದ್ದಾನೆ. ಅದಕ್ಕೆ ಒಳ್ಳೆಯ ನಿದರ್ಶನವೆಂದರೆ 21ನೇ ಶತಮಾನದ ಗಣನೀಯ ಆವಿಷ್ಕಾರ ಎಂದೇ ಹೇಳಬಹುದಾದ “ಜಂಗಮವಾಣಿ” ಅಥವಾ ಬಹುಜನಪ್ರಿಯ ಮೊಬೈಲ್. ಮೊದಲೆಲ್ಲಾ ನಾವು ಶ್ರೀಮಂತರು ಅಥವಾ ಅನುಕೂಲವಂತರ ಕೈಯಲ್ಲಿ ಮಾತ್ರ ನೋಡಬಹುದಾಗಿದ್ದ ಈ ಮೊಬೈಲ್, ಈಗ ಜನಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದೆ.
ಕಾಲ ಬದಲಾದಂತೆ ತಂತ್ರಜ್ಞಾನದಲ್ಲಿಯೂ ಉನ್ನತ ಮಟ್ಟದ ಬೆಳವಣಿಗೆಗಳಾಗಿವೆ. ಬೆರಳ ತುದಿಯಲ್ಲಿ ಜಗತ್ತು ಎಂಬಂತೆ, ನಾವು ಕುಳಿತಲ್ಲಿಯೇ ಜಗತ್ತಿನ ಆಗುಹೋಗುಗಳನ್ನು ತಿಳಿಯಲು ಸಾಧ್ಯವಾಗುತ್ತಿದೆ. ಈ ಮೊದಲು ಸಮಯ ಕಳೆಯಲು ದೂರದರ್ಶನ, ರೇಡಿಯೋ, ಕತೆ-ಕಾದಂಬರಿಗಳಿಗೆ ಮೊರೆ ಹೋಗುತ್ತಿದ್ದ ಯುವ ಪೀಳಿಗೆ ಈಗ ಊಟ ತಿಂಡಿಯನ್ನು ಬೇಕಾದರೂ ಬಿಡಬಲ್ಲರು ಆದರೆ ಮೊಬೈಲ್ ಇಲ್ಲದೇ 10 ನಿಮಿಷ ಕೂಡಾ ಇರಲಾರೆವು ಎಂಬ ಪರಿಸ್ಥಿತಿಗೆ ತಲುಪಿದ್ದಾರೆ.

ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ, ಇಂದು ಚಿಕ್ಕವಯಸ್ಸಿನ ಮಕ್ಕಳಿಂದ ಹಿಡಿದು ಹಿರಿಯರನ್ನೂ ಕೂಡ ಮೊಬೈಲ್ ಆವರಿಸಿಕೊಂಡಿದೆ ಎಂಬುದನ್ನು ನಾವು ಒಪ್ಪಲೇಬೇಕು. ಮೊಬೈಲ್ ಬಳಕೆ ಜಾಸ್ತಿಯಾದಂತೆ, ನಾನಾ ವಿಧದ ಮೊಬೈಲ್ ಕಂಪನಿಗಳು ಜನರನ್ನು ಸೆಳೆಯಲು ನಾನಾ ರೀತಿಯ ವೈಶಿಷ್ಟ್ಯ ಹಾಗೂ ವಿನ್ಯಾಸಗಳುಳ್ಳ ಮೂಬೈಲ್ ಗಳ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ಅಲ್ಲದೇ ಒಂದೇ ಸಾಧನದಲ್ಲಿ ವೀಡಿಯೊ ಗೇಮ್‌ನಿಂದ ಹಿಡಿದು ಟಿವಿ ಕಂಪ್ಯೂಟರ್‌ವರೆಗಿನ ಎಲ್ಲಾ ಪ್ರಯೋಜನಗಳನ್ನು ನೀಡುತ್ತಿದೆಯಾದ್ದರಿಂದ, ಇಂದು ಮೊಬೈಲ್ ಎನ್ನುವುದು ಮನುಷ್ಯನ ಅವಿಭಾಜ್ಯ ಅಂಗ ಎನ್ನುವ ಮಟ್ಟಿಗೆ ತಲುಪಿದ್ದೇವೆ.
ಆದರೆ, ನಾಣ್ಯಕ್ಕೆ ಎರಡು ಮುಖವಿರುವಂತೆ, ಮನುಷ್ಯ ಎಷ್ಟೇ ಬುದ್ಧಿವಂತಿಕೆಯಿಂದ ಹೊಸ ಆವಿಷ್ಕಾರಗಳನ್ನು ಮಾಡಿದರೂ ಸಹ ಅದರಲ್ಲಿ ಯಾವುದಾದರೂ ಕುಂದುಕೊರತೆ ಇದ್ದೇ ಇರುತ್ತದೆ.

ಆದರೆ ಅದರ ಪರಿಣಾಮ ನಮಗೆ ಕಂಡುಬರುವುದು ತಡವಾಗಿ. ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತವು ದಿನದಿಂದ ದಿನಕ್ಕೆ ತಂತ್ರಜ್ಞಾನದಲ್ಲಿ, ಕೈಗಾರಿಕೆಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹೀಗೆ ಹಲವಾರು ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಆದರೆ ಅದರ ಉಪಯೋಗ ಮಿತಿಯಲ್ಲಿದ್ದರೆ ಉತ್ತಮ.
ಇತ್ತೀಚಿಗಂತೂ ತಂತ್ರಜ್ಞಾನ ಯಾವ ಮಟ್ಟಿಗೆ ಅಭಿವೃದ್ಧಿಯಾಗುತ್ತಿದೆ ಎಂದರೆ, ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್(WhatsApp) ತನ್ನ ಬಳಕೆದಾರರಿಗೆ ಟೈಪ್ ಮಾಡದೆಯೇ ಸಂದೇಶಗಳನ್ನು ಕಳುಹಿಸುವ ಅವಕಾಶವನ್ನು ನೀಡಿದೆ, ಇದು ಅದರ ಡಿಜಿಟಲ್ ಅಸಿಸ್ಟೆಂಟ್ ಫೀಚರ್ಸ್ ನಿಂದ ಕೆಲಸ ಮಾಡುತ್ತದೆ. ಗೂಗಲ್ ಅಸಿಸ್ಟೆಂಟ್ ಮಾದರಿಯಲ್ಲಿರುವ ನೂತನ ಆಯ್ಕೆ ಮೂಲಕ ಟೈಪ್ ಮಾಡದೆಯೇ ಬೇರೊಬ್ಬರಿಗೆ ಸಂದೇಶವನ್ನು ಕಳುಹಿಸಬಹುದು.

ಈ ಹೊಸ ಫೀಚರ್ ಇನ್ಬಿಲ್ಟ್ ಆಗಿರಲಿದ್ದು, ಬಳಕೆದಾರರು ಸಂದೇಶವನ್ನು ಧ್ವನಿ ಮೂಲಕ ನಿರ್ದೇಶಿಸಬಹುದು. ಈ ಸಂದರ್ಭದಲ್ಲಿ ಸಂದೇಶ ಸ್ವಯಂಚಾಲಿತವಾಗಿ ಟೈಪ್ ಆಗಲಿದೆ. ಇದಕ್ಕಾಗಿ ನೀವು ವರ್ಚುವಲ್ ಅಸಿಸ್ಟೆಂಟ್ ಅನ್ನು ವಾಟ್ಸಾಪ್ ಸಂದೇಶ ಕಳುಹಿಸಲು ಕೇಳಿದರೆ ಸಾಕು ಅದು ಕೆಲಸ ಮಾಡಲಿದೆ.
ಹೀಗೆ, ಇಷ್ಟೆಲ್ಲಾ ಸಕಲ ಸೌಕರ್ಯವನ್ನು ನೀಡುವ ಮೊಬೈಲ್ ನಲ್ಲಿ ಕೇಳುವ ತಮ್ಮ ಧ್ವನಿಯನ್ನೇ ಜನ ಮೆಚ್ಚುವುದಿಲ್ಲವಂತೆ! ಹೌದು, ವರದಿಯ ಪ್ರಕಾರ ಮೊಬೈಲ್ ನಲ್ಲಿ ಮಾತನಾಡುವಾಗ ಕೇಳುವ ತಮ್ಮ ಧ್ವನಿಯೇ ಜನಕ್ಕೆ ಇಷ್ಟವಾಗುವುದಿಲ್ಲ ಎನ್ನುವುದು ಹಲವರ ತಕರಾರು ಎಂದರೆ ಅಚ್ಚರಿಯಲ್ಲದೇ ಇನ್ನೇನು!
- ಪವಿತ್ರ