ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡುವುದಕ್ಕೆ ರಾಜ್ಯ ಸರ್ಕಾರಗಳು ಒಪ್ಪುತ್ತಿಲ್ಲ – ಹರ್ದೀಪ್ ಸಿಂಗ್ ಪುರಿ

ಕೋಲ್ಕತ್ತಾ ಸೆ 24 : ಪೆಟ್ರೋಲ್ ಮತ್ತು ಡೀಸೆಲ್ ನಿಂದ ಸಂಗ್ರಹಿಸಿದ ತೆರಿಗೆಯನ್ನು ಉಚಿತ ಪಡಿತರ, ವಸತಿ ಹಾಗೂ ಇತರೆ ಯೋಜನೆಗಳ ಮೂಲಕ ಬಡವರಿಗೆ ತಲುಪಿಸುತ್ತಿದ್ದೇವೆ. ಹಾಗಾಗಿ ಪೆಟ್ರೋಲ್ ಡಿಸೇಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದು ಹಾಗೂ ಇದನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಕಷ್ಟ ಆದರೂ ಇದಕ್ಕೆ ನಾವು ಸಿದ್ದವಿದ್ದೇವೆ, ಆದರೆ ಇದಕ್ಕೆ ರಾಜ್ಯ ಸರ್ಕಾರಗಳು ಅವಕಾಶ ನೀಡುತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಕೋಲ್ಕತ್ತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂದರ್ಶನದಲ್ಲಿ ಮಾತನಾಡುತ್ತಾ ‘ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪೆಟ್ರೋಲ್ ದರ 100 ರೂ ದಾಟಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲು ಸಿದ್ದವಿದೆ. ಆದರೆ ಬೆಲೆ ಇಳಿಕೆಗೆ ರಾಜ್ಯಗಳು ಅವಕಾಶ ನೀಡುತ್ತಿಲ್ಲ.

ಕೇಂದ್ರ ಸರ್ಕಾರ ಪ್ರತಿ ಲೀ. ಪೆಟ್ರೋಲ್ ಮೇಲೆ 32 ರೂ. ತೆರಿಗೆ ವಿಧಿಸುತ್ತಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 19 ಡಾಲರ್ ಇದ್ದಾಗಲೂ ನಾವು 32 ರೂ. ತೆರಿಗೆ ವಿಧಿಸುತ್ತಿದ್ದೆವು. ಈಗ ಕಚ್ಚಾ ತೈಲ ಬೆಲೆ 70 ಡಾಲರ್ ಗಿಂತ ಹೆಚ್ಚಾಗಿದೆ. ಈಗಲೂ ಅಷ್ಟೇ ತೆರಿಗೆಯನ್ನು ವಿಧಿಸುತ್ತಿದ್ದೇವೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪುತ್ತಿಲ್ಲ, ಹೀಗಾಗಿ ಬೆಲೆ ಇಳಿಕೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

Exit mobile version