ಅದು ನೂರಾರು ಪ್ರಯಾಣಿಕರನ್ನು ಹೊತ್ತು ತಂದಿದ್ದ ವಿಮಾನ, ಇನ್ನೇನು ಕೆಲವೇ ಹೊತ್ತಿನಲ್ಲಿ ಲ್ಯಾಂಡಿಗ್ ಆಗಿ ಪ್ರಯಾಣಿಕರನ್ನ ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ತಲುಪಿಸಬೇಕಿತ್ತು. ಅಷ್ಟರಲ್ಲೇ ತನ್ನ ಅಟ್ಟಹಾಸ ಮೆರೆದ ವಿಧಿ ನೂರಾರು ಪ್ರಯಾಣಿಕರ ಬದುಕನ್ನೇ ಛಿದ್ರಗೊಳಿಸಿದೆ.
ಹೌದು, ದೂರದ ದುಬೈನಿಂದ 174 ಪ್ರಯಾಣಿಕರನ್ನು ಹೊತ್ತು ತಂದಿದ್ದ ಏರ್ ಇಂಡಿಯಾ ವಿಮಾನ ಶುಕ್ರವಾರ ಸಂಜೆ ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದ ರನ್ವೇನಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ.
ದುಬೈ- ಕೋಯಿಕ್ಕೋಡ್ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾದ X1344 ಬೋಯಿಂಗ್ 737 ವಿಮಾನದಲ್ಲಿ 174 ಮಂದಿ ಪ್ರಯಾಣಿಕರು, 10 ಮಕ್ಕಳು ಇಬ್ಬರು ಪೈಲೆಟ್ ಹಾಗೂ ವಿಮಾನ ಸಿಬ್ಬಂದಿ ಇದ್ದರು. ನಿರೀಕ್ಷೆಯಂತೆ ಸಂಜೆ 7:41ರಲ್ಲಿ ಲ್ಯಾಂಡ್ ಆಗಿದ್ದು, ರನ್ವೇನಲ್ಲಿ ಅಪಘಾತಕ್ಕೀಡಾಗಿದೆ.
ಘಟನೆಯಲ್ಲಿ ವಿಮಾನ ಇಬ್ಭಾಗವಾಗಿದ್ದು, ಪರಿಣಾಮ ಪೈಲಟ್ ಸೇರಿದಂತೆ 14 ಮೃತಪಟ್ಟಿದ್ದಾರೆ. ಅಲ್ಲದೇ 15 ಮಂದಿಗೆ ಗಂಭೀರ ಗಾಯಗಳಾಗಿದ್ದು, 123 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಮಲಪುರಂ ಎಸ್ಪಿ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಪೈಲಟ್ ಅನ್ನು ಕ್ಯಾಪ್ಟನ್ ದೀಪಕ್ ವಸಂತ ಸಾಥೆ ಎಂದು ತಿಳಿದು ಬಂದಿದೆ.
ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ಸ್ಥಳದಲ್ಲಿ 24 ಆ್ಯಂಬುಲೆನ್ಸ್ಗಳು ಹಾಗೂ ಅಗ್ನಿ ಶಾಮಕ ವಾಹನಗಳಿದ್ದು, ರಕ್ಷಣಾ ಕಾರ್ಯಾ ಆರಂಭಿಸಲಾಗಿದೆ. ಅಲ್ಲದೆ, ಎನ್ಡಿಆರ್ಎಫ್ ತಂಡದ 50 ಸೈನಿಕರು ರಕ್ಷಣಾ ಸ್ಥಳಕ್ಕೆ ಧಾವಿಸಿದ್ಧಾರೆ. ಈ ನಡುವೆ ನಾಗರೀಕ ವಿಮಾನಯಾನ ಸಚಿವಾಲಯ ಅಪಘಾತದ ತನಿಖೆಗೆ ಆದೇಶಿಸಿದೆ.
ವಿಮಾನ ಅಪಘಾತಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್
ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.