ವಿಷದ ಕೂಪವಾಗ್ತಿದೆ ಹಾರೋಹಳ್ಳಿಕೆರೆ! ಮಾಲಿನ್ಯ ಅಧಿಕಾರಿಗಳ ಲಂಚಾವತಾರದಿAದ ವಿಷವಾಗ್ತಿದೆ ನೆಲ ಜಲ. ಸಂಸ್ಕರಿಸದೆ ನೇರವಾಗಿ ಭೂಮಿಗೆ ಬಿಡ್ತಿದ್ದಾರೆ ವಿಷ ತ್ಯಾಜ್ಯ

ವಿಷದ ಕೂಪವಾಗ್ತಿದೆ ಹಾರೋಹಳ್ಳಿಕೆರೆ! Poisonous lake in Harohalli.

ಬೆಂಗಳೂರು ಕನಕಪುರ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಹಾರೋಹಳ್ಳಿಯ ದೊಡ್ಡಕೆರೆ ಸುಮಾರು ನೂರು ಎಕರೆ ವಿಸ್ತೀರ್ಣ ಭೂ ಕಬಳಿಕೆಗೆ ತುತ್ತಾಗಿ ಈ ಕೆರೆಯು ಈಗ ಕಿರಿದಾಗಿರುವುದಲ್ಲದೇ ತ್ಯಾಜ್ಯ ತುಂಬಿಕೊಂಡು, ವಿಷದ ಕೂಪವಾಗಿದೆ.

ಹಲವಾರು ವರ್ಷಗಳಿಂದ ಇಲ್ಲಿಯ ಅಂತರ್ಜಲಕ್ಕೆ ಜೀವಕೆರೆ ಇದಾಗಿದೆ, ಅನಾದಿ ಕಾಲದಿಂದಲೂ ಜನರು ಈ ಕೆರೆಯ ನೀರನ್ನು ಕುಡಿಯಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ದನಕರುಗಗಳಿಗೆ ನೀರುಣಿಸಲು ಕೃಷಿಯೇತರ ಕೆಲಸಕ್ಕೆ ವಿವಿಧ ರೀತಿಯಲ್ಲಿ ನೆರವು ಪಡೆಯುತ್ತಿದ್ದರು.

ಕಾಲಕ್ರಮೇಣ ಹಳ್ಳಿಯು ಪಟ್ಟಣವಾಗಿ ಪರಿವರ್ತನೆ ಹೊಂದಿದಂತೆ, ಇಲ್ಲಿನ ಜನಸಂಖ್ಯಾ ಪ್ರಮಾಣ ಹೆಚ್ಚುಗುತ್ತಾ ಹೋದಂತೆ, ಕೆರೆಯ ಓತ್ತುವರಿ ನಡೆದಿದೆ. ಇದಕ್ಕೆ ಪ್ರಮುಖ ದೃಷ್ಟಾಂತ ಸುಮಾರು 100 ಎಕರೆ ವಿಸ್ತೀರ್ಣದ ಕೆರೆ ಈಗ ಕೇವಲ 40 ಎಕರೆಗೆ ಬಂದು ಇಳಿದಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರದಿಂದಾಗಿ ಇಲ್ಲಿಗೆ ವಲಸೆ ಬರುವವರ  ಸಂಖ್ಯೆಯೂ ಹೆಚ್ಚಾಗಿದ್ದು. ಬಾಡಿಗೆಗೆ ಬರುವ ವಲಸಿಗರು ಕೆರೆಯನ್ನು ಕಸದರಾಶಿ ಮಾಡುತ್ತಾರೆ ಎನ್ನುವುದು ಸ್ಥಳೀಯರ ಆರೋಪ.

ನಮ್ಮ ಜನ, ನಮ್ಮ ಭೂಮಿ, ನಮ್ಮ ನಾಡೆಂದು ಅರಿತು ಬಾಳಬೇಕು. ಅಲ್ಲದೇ, ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ಮಾನವನಾಗಿ ಇರು ಎನ್ನುವ ವಿಶ್ವಮಾನವ ಸಂದೇಶ ಕುವೆಂಪು ಅವರ ನುಡಿಯನ್ನು ವಲಸೆ ಬರುವ ಬಾಡಿಗೆದಾರರು ಮರೆತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಕೆರೆಯು ಅಂತರ್ಜಲದ ಕೊಂಡಿಯಾಗಿದ್ದ ಕೊಳವೆಬಾವಿಗಳಿಗೆ ಇದುವೇ ಮೂಲ ಆಧಾರ ಆದರೆ ಈ ಕೆಳಗೆ ಬರುವ ನೀರಿನಿಂದ ಅಂತರ್ಜಲ ಪ್ರಮಾಣ ಹೆಚ್ಚಿದ್ದರೂ ಈ ನೀರು ಕುಡಿಯಲು ಅಥವಾ ಬಳಕೆಗೆ ಯೋಗ್ಯವೇ? ಎಂಬುದು ಪ್ರಶ್ನಾತೀತವಾಗಿದೆ. ಕೆಲವು ಚಾನೆಲ್ಗಳ ಮೂಲಕ ಹರಿಯುವ ನೀರು ಬೇರೆ ಸ್ಥಳದಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಹಜವೇ ಸರಿ

ಸ್ಯಾನಿಟರಿ ನೀರು, ತ್ಯಾಜ್ಯವಸ್ತುಗಳ ಕಸದ ರಾಶಿ ಹೀಗೆ ಒಂದಲ್ಲ ಎರಡಲ್ಲ ಹಲವಾರು ಕಲುಷಿತ  ತ್ಯಾಜ್ಯಗಳ ಅಡಗು ತಾಣ ಹಾರೋಹಳ್ಳಿ ಕೆರೆ. ಇಷ್ಟಕ್ಕೆಲ್ಲ ಕಾರಣ ಇಲ್ಲಿಯ ಒಳಚರಂಡಿಯ ವ್ಯವಸ್ಥೆ.

ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಒಂದು ವಾಕಿಂಗ್ ಪಾರ್ಕ್ ಹಾಗೂ ಕೆರೆ ಅಭಿವೃದ್ಧಿಗೆ ಸುಮಾರು ಹತ್ತು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದರು. ಆದರೆ ಈಗ ಹಾರೋಹಳ್ಳಿ ತಾಲೂಕು ಪಟ್ಟಣ ಪಂಚಾಯಿತಿ ಎಂಬ ನೆನೆಗುದಿಗೆ ಬಿದ್ದಿರುವ ಇಲ್ಲಿಯ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಬಿಡುಗಡೆ ಮಾಡಿದ ಹಣ ಏನಾಯಿತು? ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲವೆನ್ನುವುದು ಇಲ್ಲಿಯ ಸ್ಥಳೀಯರ ಆಕ್ರೋಶವಾಗಿದೆ.

ಕೆರೆಯ ಬಳಿ ವ್ಯಾಪಾರ ಮಾಡಲು ಪಂಚಾಯಿತಿ ಅವರೇ ಸ್ಥಳವನ್ನು ಸೂಚಿಸಿದ್ದಾರೆ ಕಸ ಹಾಕಿದವರಿಗೆ ಐದುನೂರು ರೂಪಾಯಿಗಳ ಎಂಬ ನಾಮಫಲಕವನ್ನು ಹಾಕಿದ್ದಾರೆ ಆದರೆ ಹೊಲವೇ ಎದ್ದು ಬೇಲಿ ತಿಂದ ಹಾಗೆ ಪಂಚಾಯಿತಿಯಿಂದ ನಿರ್ಮಿಸಿರುವ ಬಸ್ ತಂಗುದಾಣದಲ್ಲಿ ಶೌಚಾಲಯದ ಕೊಳಚೆ ನೀರಿನ ಪೈಪ್ ಈ ಕೆರೆಗೆ ಬಿಟ್ಟಿರುವುದು ಮೇಲೆ ತಿಳಿಸಿರುವ ಗಾದೆಗೆ ನಿದರ್ಶನ ಮತ್ತು ಇಲ್ಲಿಯ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದುಕಾಣುತ್ತದೆ.

ನಮ್ಮ ತಂಡ ಕೆರೆಯ ಕಲುಷಿತದ ಬಗ್ಗೆ ವರದಿ ಮಾಡಲು ಹೋದಾಗ ಒಂದು ಅಚ್ಚರಿ ಕಾದಿತ್ತು ಅದೇನೆಂಬುದನ್ನು ನೀವೇ ನೋಡಿ….

ಇಷ್ಟು ದಿನ ಕಸದ ರಾಶಿಯಾಗಿದ್ದ ಈ ಕೆರೆ ಈಗ ಶವದ ತಾಣವಾಗಿದೆ. ಹೌದು ಇದು ಈ ದಿನ ನಮ್ಮ ತಂಡ ವರದಿ ಮಾಡುವ ಸಂದರ್ಭದಲ್ಲಿ ಕೆರೆಯಲ್ಲಿ ದೊರೆತಿರುವ ಈ ಶವ ಸುಮಾರು ಮೂರು ದಿನಗಳಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕೊಳೆತು ನಾರುತ್ತಿರುವ ಶವದ ದುರ್ವಾಸನೆ ಮಾರುದ್ದ ಹೊಡೆಯುತ್ತಿತ್ತು.

ಈ ಕೆರೆಯ ದುಸ್ಥಿತಿಗೆ ನೇರ ಹೊಣೆ ಇಲ್ಲಿನ ಪಂಚಾಯಿತ್‌ ಅಧಿಕಾರಿಗಳು ಎಂಬುದು ಸ್ಥಳೀಯರ ಆರೋಪವಾಗಿದೆ. ಅಧಿಕಾರಿಗಳಾಗಲೀ, ರಾಜ್ಯ ಸರ್ಕಾರವಾಗಲೀ, ಜಲಮಂಡಳಿ ಇಲಾಖೆಯಾಗಲೀ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಆಲಸ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸರ್ಕಾರ ತಮ್ಮ ಒಳಜಗಳಗಳನ್ನು ಬಿಟ್ಟು ಒಳಚರಂಡಿಯ ಸುವ್ಯವಸ್ಥೆಗಳನ್ನು ಕಲ್ಪಿಸಿ, ಇಲ್ಲಿನ ಜನರ ಜೀವನದಲ್ಲಿ ಒಳ್ಳೆಯ ನೆಲ-ಜಲ ಮತ್ತು ಮೂಲಭೂತ ಸೌವಲತ್ತುಗಳನ್ನು ಒದಗಿಸಬೇಕೆಂದು  ವಿಜಯ ಟೈಮ್ಸ್‌ನ ಆಶಯವಾಗಿದೆ.

ಸಿಟಿಜನ್‌ ಜರ್ನಲಿಸ್ಟ್‌ ಉದಯ್‌

Exit mobile version