ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ವಿರುದ್ಧ ಪೊಲೀಸ್‌ ಕೇಸ್‌ ದಾಖಲೆ: 232 ಕೋಟಿ ರೂಪಾಯಿ ವಂಚನೆ ಪ್ರಕರಣ

Bengaluru: ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ (Ramesh Jarakiholi) ಅವರು, ಸಕ್ಕರೆ ಕಾರ್ಖಾನೆಗೆ 232 ಕೋಟಿ ರೂ. ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಬೆಂಗಳೂರು ನಗರದ ವಿ.ವಿ.ಪುರ (V.V Pura) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

2013 ರಿಂದ 2017ರವರೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ (Apex Bank) ಮತ್ತು ಅದರ ಸಮೂಹ ಬ್ಯಾಂಕ್‌ಗಳಿಂದ ಬೆಳಗಾವಿಯ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್‌ ಸಕ್ಕರೆ ಕಾರ್ಖಾನೆಯ ಸ್ಥಾಪನೆ, ವಿಸ್ತರಣೆ ಹಾಗೂ ನಿರ್ವಹಣೆಗಾಗಿ ಸಾಲ ಪಡೆದಿದ್ದು, ಸಾಲವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ರಾಜಣ್ಣ ಅವರು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದಾರೆ.

232 ಕೋಟಿ ರೂ. ಸಕ್ಕರೆ ಕಾರ್ಖಾನೆಗಾಗಿ ಸಾಲವನ್ನು ಪಡೆದಿದ್ದು, ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಿಂದ ಹಾಗೂ ಅದರ ಸಮೂಹ ಬ್ಯಾಂಕ್‌ಗಳಾದ ವಿಜಯಪುರ ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌, ತುಮಕೂರು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ (Tumkur District Central Cooperative Bank), ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಮತ್ತು ಉತ್ತರ ಕನ್ನಡ ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ನಿಂದ ಹಂತ-ಹಂತವಾಗಿ ಪಡೆಯಲಾಗಿದೆ.

2023ರ ಆಗಸ್ಟ್‌ ಅಂತ್ಯಕ್ಕೆ ಅಸಲು ಮತ್ತು ಬಡ್ಡಿ ಸೇರಿ ಒಟ್ಟಾರೆ 439 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದ್ದು, ಸಾಲವನ್ನು ತೀರಿಸಿಲ್ಲ ಎಂದು ರಾಜಣ್ಣ ದೂರು ದಾಖಲಿಸಿದ್ದು, ರಾಜಣ್ಣ ಅವರ ದೂರು ಆಧರಿಸಿ ಶಾಸಕ ರಮೇಶ್‌ ಜಾರಕಿಹೊಳಿ, ಕಾರ್ಖಾನೆಯ ನಿರ್ದೇಶಕರಾದ ವಸಂತ್‌ ವಿ.ಪಾಟೀಲ್‌ (V Patil) ಮತ್ತು ಶಂಕರ್‌ ಎ.ಪಾವಡೆ ವಿರುದ್ಧ ನಂಬಿಕೆ ದ್ರೋಹ, ವಂಚನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೌಭಾಗ್ಯ ಲಕ್ಷ್ಮಿ ಶುಗರ್ಸ್ (Saubhagya Lakshmi Sugars) ಲಿಮಿಟೆಡ್‌ನ ಆಡಳಿತ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರನ್ನು ಬದಲಾವಣೆ ಮಾಡಬಾರದು ಎಂದು ಸಾಲ ಮಂಜೂರಾತಿ ಸಂದರ್ಭದಲ್ಲೇ ಷರತ್ತು ವಿಧಿಸಲಾಗಿದ್ದು, ಆದರೆ, ಆರೋಪಿಗಳು ಸಾಲ ಮರುಪಾವತಿ ಮಾಡುವುದರಿಂದ ತಪ್ಪಿಸಿಕೊಳ್ಳಲು ಮತ್ತು ಬ್ಯಾಂಕ್‌ಗೆ ಮೋಸ ಮಾಡುವ ದುರುದ್ದೇಶಕ್ಕೆ ಕಾರ್ಖಾನೆ ಆಡಳಿತ ಮಂಡಳಿಯ ಉದ್ದೇಶಗಳಿಂದ ಹೊರ ನಡೆದಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version