ಪ್ರಕಾಶ್ ಟ್ರಾವೆಲ್ಸ್ ಮಾಲೀಕನ ಆತ್ಮಹತ್ಯೆಯೋ ? ಕೊಲೆಯೋ ?

prakash travel

ಪ್ರಕಾಶ್‌ ಟ್ರಾವೆಲ್ಸ್ ಮಾಲೀಕರಾಗಿದ್ದ ಪ್ರಕಾಶ್‌ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರದಲ್ಲಿ ನಡೆದಿದೆ. ಪ್ರಕಾಶ್‌ ಅವರ ಮೃತ ದೇಹ ಹೊಸನಗರ ಸಮೀಪದ ಪಟಗುಪ್ಪ ಸೇತುವೆ ಬಳಿ ಶರಾವತಿ ನದಿ ಹಿನ್ನೀರಿನಲ್ಲಿ ದೊರೆತಿದೆ. ಪೊಲೀಸರು ಇದೊಂದು ಆತ್ಮಹತ್ಯೆ ಎಂದಿದ್ದರೂ ಕುಟುಂಬಸ್ಥರು ಮಾತ್ರ ಇದೊಂದು ಕೊಲೆ ಎಂದು ಆರೋಪಿಸುತ್ತಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದ ಒಡೆಯ ದಿಢೀರ್‌ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದು ಉದ್ಯೋಗಿಗಳಿಗೆ ಅರಗಿಸಿಕೊಳ್ಳಲಾಗದ ಪರಿಸ್ಥಿತಿ ಉಂಟಾಗಿದೆ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಹಾಸನದಿಂದ ಸಾಗರಕ್ಕೆ ಉದ್ಯೋಗ ಅರಸಿ ಬಂದ ಯುವಕ ಜೀವನೋಪಾಯಕ್ಕೆ ಕ್ಲೀನರ್‌ ವೃತ್ತಿ ಸೇರಿಕೊಂಡಿದ್ದ. ಕೆಲವು ವರ್ಷಗಳಲ್ಲಿ ಬಸ್‌  ಖರೀದಿಸಿ ಇಂದಿಗೆ ಅರವತ್ತು ಬಸ್‌ಗಳ ಮಾಲೀಕನಾಗಿ ಬೆಳೆದಿದ್ದರು. ಈತನ ಯಶೋಗಾಥೆ ಯಾವ ಸಾಧಕನಿಗೂ ಕಡಿಮೆ ಏನಲ್ಲ. ಈ ಅವಧಿಯಲ್ಲಿ ಏಳು-ಬೀಳುಗಳಿಗೆ ಕುಗ್ಗದೇ ತನ್ನದೇ ಹೆಸರಿನ ಪ್ರಕಾಶ್‌ ಟ್ರಾವೆಲ್ಸ್‌ ಸಂಸ್ಥೆಯನ್ನು ಮಲೆನಾಡಿನ ಮನೆಮಾತಾಗಿಸಿದ್ದ. ಆದರೆ, ಪ್ರಕಾಶ್‌ ಟ್ರಾವೆಲ್ಸ್‌ನ ಪ್ರಕಾಶ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.


ಉದ್ಯೋಗಿಗಳ ನೆಚ್ಚಿನ ಮಾಲೀಕ

 ಕೇವಲ ಒಂದು ಬಸ್‌ನಿಂದ ಸಾರಿಗೆ ಉದ್ಯಮವನ್ನು ಆರಂಭಿಸಿ ಈಗ ಸುಮಾರು 60 ಬಸ್ ಗಳ ಮಾಲೀಕನಾಗಿದ್ದವರು ಪ್ರಕಾಶ್‌. ಮಲೆನಾಡಿನಲ್ಲಿ ಪ್ರಕಾಶ್ ಟ್ರಾವೆಲ್ಸ್ ನ ಬಸ್‌ಗಳು ಎಂದರೆ ತಮ್ಮದೇ ಬಸ್‌ಗಳು ಎನ್ನುವಷ್ಟು ಪ್ರೀತಿ ಅಕ್ಕರೆ.! ಮದುವೆ ದಿಬ್ಬಣ, ಶಾಲಾ-ಕಾಲೇಜು ಪ್ರವಾಸ ಎಲ್ಲದಕ್ಕೂ ಅಗ್ಗದ ದರದಲ್ಲಿ ಇವರ ಬಸ್‌ಗಳೇ ಬೇಕು. ಆದರೆ ಐವತ್ತು ನಾಲ್ಕು ವರ್ಷ ವಯಸ್ಸಿನ ಮಾಲೀಕ ದಿಢೀರನೇ ಎಲ್ಲರನ್ನು ಬಿಟ್ಟು ಹೊರಟು ಹೋಗಿದ್ದು ಅವರ ಕುಟುಂಬಸ್ಥರಿಗೆ, ನೌಕರರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಸಹಿಸಿಕೊಳ್ಳಲಾಗದ ಘಟನೆಯಾಗಿದೆ


ಪ್ರಕಾಶ್‌ ಅವರ ಮೃತ ದೇಹ ಸಾಗರಕ್ಕೆ ಬರುತ್ತಿದ್ದಂತೆ ಜನಸ್ತೋಮವೇ ಸೇರಿತ್ತು. ಅಪಾರ ಅಭಿಮಾನಿಗಳು ಬೈಕ್‌ , ಕಾರ್‌ಗಳ ಮೂಲಕ ಅಂಬುಲೆನ್ಸ್‌ ಹಿಂಬಾಲಿಸಿದ್ದರು. ಪ್ರಕಾಶ್‌ ಟ್ರಾವೆಲ್ಸ್ ಬಸ್‌ಗಳೂ ಸಹ ಸಾಲುಗಟ್ಟಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಣ್ಣೀರು ತರಿಸುತ್ತಿತ್ತು. ಹೀಗೆ ಮಲೆನಾಡಿನ ಅಧ್ಭುತ ಸಾಧಕ ಕಾಫಿ ಡೇ ಸಿದ್ಧಾರ್ಥ್‌ ರೀತಿಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದು ಜನರಲ್ಲಿ ತಲ್ಲಣ ಮೂಡಿಸಿದೆ.

ಪ್ರಕಾಶ್‌ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ್ರಾ, ಅವರಿಂದ ಸಬ್‌ ಆಪರೇಟ್‌ಗೆ ಬಸ್‌ಗಳನ್ನ ತೆಗೆದುಕೊಂಡವರು ಮೋಸ ಮಾಡಿದ್ರಾ. ಬೇರೆಯವರ ಕಿರುಕುಳ ಇತ್ತಾ ಎಲ್ಲಾ ಅನುಮಾನಗಳು ಮೂಡತೊಡಗಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾತನಾಡಿ, ಪ್ರಕರಣವನ್ನು ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Exit mobile version