ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ; ಕರಾವಳಿ ಕಾಂಗ್ರೆಸ್‍ನಲ್ಲಿ ಭಾರೀ ಚರ್ಚೆ!

bjp

ಕರ್ನಾಟಕದ(Karnataka) ಕರಾವಳಿ(Coastal) ಭಾಗದಲ್ಲಿ ಪ್ರಬಲ ಕಾಂಗ್ರೆಸ್(Congress) ನಾಯಕನಾಗಿ ಗುರುತಿಸಿಕೊಂಡಿರುವ ಪ್ರಮೋದ್ ಮಧ್ವರಾಜ್(Pramod Madhwaraj) ಕಾಂಗ್ರೆಸ್ ತೊರೆದು ಬಿಜೆಪಿ(BJP) ಸೇರಿದ್ದಾರೆ.

ಪ್ರಮೋದ್ ಮಧ್ವರಾಜ್ ಅವರ ಈ ನಿರ್ಧಾರದಿಂದ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಈ ಕುರಿತು ರಾಜ್ಯ ಕಾಂಗ್ರೆಸ್‍ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಪ್ರಮೋದ್ ಮಧ್ವರಾಜ್ ಕರಾವಳಿ ಭಾಗದ ಪ್ರಬಲ ಮೊಗವೀರಾ ಸಮುದಾಯದ ಪ್ರಶ್ನಾತೀತ ನಾಯಕ. ಅತ್ಯಂತ ಸಭ್ಯ ರಾಜಕಾರಣಿ ಎಂದೇ ಪ್ರಮೋದ್ ಮಧ್ವರಾಜ್‍ರನ್ನು ಕರಾವಳಿ ಭಾಗದ ಜನತೆ ಗುರುತಿಸುತ್ತಾರೆ. ಅವರ ತಂದೆ ಮಲ್ಪೆ ಮಧ್ವರಾಜ್ 1962ರಲ್ಲಿ ಉಡುಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಅವರ ತಾಯಿ ಮನೋರಮಾ 1974ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿದ್ದರು. ನಂತರ 2004ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ರಾಜಕೀಯ ಹಿನ್ನಲೆಯ ಕುಟುಂಬದಿಂದ ಬಂದಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಕರಾವಳಿ ಭಾಗದಲ್ಲಿ ಪ್ರಬಲ ಹಿಂಬಾಲಕರ ಪಡೆಯಿದೆ. ಹೀಗಾಗಿ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದು ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ಬಲವನ್ನು ಕುಗ್ಗಿಸಿದೆ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕಳೆದ ಅನೇಕ ದಿನಗಳಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಅಂತರ ಕಾಯ್ದುಕೊಂಡಿದ್ದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗದೆ ದೂರ ಉಳಿಯುತ್ತಿದ್ದರು. ಕೆಲ ದಿನಗಳ ಹಿಂದೆ ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡು ಹೊಗಳಿದ್ದರು. ಆಗಲೇ ಅವರು ಬಿಜೆಪಿ ಸೇರುತ್ತಾರೆ ಎಂಬ ಅನುಮಾನ ಎಲ್ಲೆಡೆ ನಿರ್ಮಾಣವಾಗಿತ್ತು. ನಿರೀಕ್ಷೆಯಂತೆ ಇದೀಗ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇನ್ನು ಪ್ರಮೋದ್ ಮಧ್ವರಾಜ್ ಸೇರ್ಪಡೆಯಿಂದ ಕರಾವಳಿ ಭಾಗದಲ್ಲಿ ಬಿಜೆಪಿಗೆ ಹೊಸ ಶಕ್ತಿ ದೊರಕಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಕರಾವಳಿಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಕಷ್ಟಸಾಧ್ಯ. ಆದರೆ ಲೋಕಸಭಾ ಅಥವಾ ರಾಜ್ಯಸಭಾ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ಅವರಿಗೆ ಸ್ಥಾನ ಕಲ್ಪಿಸುವ ಭರವಸೆಯನ್ನು ರಾಜ್ಯ ಬಿಜೆಪಿ ನಾಯಕರು ನೀಡಿದ್ದಾರೆ.

ಒಟ್ಟಾರೆಯಾಗಿ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಿಂದ ಕರಾವಳಿಯಲ್ಲಿ ಕೇಸರಿಪಡೆ ಮತ್ತಷ್ಟು ಬಲಗೊಂಡಿದೆ.

Exit mobile version