ಒಂದು ಬಟ್ಟೆಯಿಂದ ಶಿಕ್ಷಣ ಅವಕಾಶದಿಂದ ವಂಚಿತರಾಗಬೇಡಿ : ಪ್ರಮೋದ್ ಮುತಾಲಿಕ್

pramod mutthalik

ಕೇವಲ ಒಂದು ಬಟ್ಟೆಯಿಂದ ನಿಮ್ಮ ಬದುಕನ್ನು ರೂಪಿಸುವ ಶಿಕ್ಷಣ ಅವಕಾಶದಿಂದ ವಂಚಿತರಾಗಬೇಡಿ. ನೀವು ಮತ್ತೇ ಹೋರಾಟ ಮಾಡುತ್ತೇವೆ ಎಂದು ಬಾಯಿ ತೆಗೆದರೆ ರಾಜ್ಯದ ಜನ ನಿಮ್ಮ ಮುಖಕ್ಕೆ ಉಗಿಯುತ್ತಾರೆ ಎಂದು ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ಉಡುಪಿಯಲ್ಲಿ(Udupi) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್(Hijab) ಪರವಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರು ಸಂಪೂರ್ಣ ಹತಾಶರಾಗಿದ್ದಾರೆ. ಹೈಕೋರ್ಟ್(Highcourt) ಕೂಡಾ ಅವರ ವಾದವನ್ನು ತಳ್ಳಿಹಾಕಿದೆ. ಹೀಗಾಗಿ ಇವರು ಸುಮ್ಮನೆ ಬಾಯಿ ಮುಚ್ಚಿಕೊಂಡು ಇದ್ದರೆ ಉತ್ತಮ. ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್‍ಗೆ ಉಡುಪಿಯ ಈ ಆರು ವಿದ್ಯಾರ್ಥಿನಿಯರೆ ಕಾರಣ. ಈ ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಈ ದೇಶದ ಸಂವಿಧಾನ ಮತ್ತು ನ್ಯಾಯಾಲಯ ಅಂತಿಮವೇ ಹೊರತು, ಕುರಾನ್, ಶರಿಯತ್, ಭಗವದ್ಗೀತೆ ಅಂತಿಮ ಅಲ್ಲ ಎಂದರು.


ಇನ್ನು ಸದ್ಯ ನಿಮ್ಮ ಹಿಂದಿರುವ ಪಿಎಫ್‍ಐ ಮತ್ತು ಸಿಎಫ್‍ಐನಂತ ಸಂಘಟನೆಗಳು ನಿಮ್ಮ ಭವಿಷ್ಯವನ್ನು ಭಯಾನಕವಾಗಿ ಬಲಿ ಕೊಡಲಿವೆ. ಹೀಗಾಗಿ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಭವಿಷ್ಯಕ್ಕೆ ನೀವೇ ಕಲ್ಲು ಹಾಕಿಕೊಳ್ಳಬೇಡಿ. ಈ ಸಂಘಟನೆಗಳಿಂದ ದೂರ ಸರಿದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಪರೀಕ್ಷೆಗಳಿಗೆ ಹಾಜರಾಗಿ ಉತ್ತಮ ನಾಗರಿಕರಾಗಿ ಎಂದು ಸಲಹೆ ನೀಡಿದರು. ಹೈಕೋರ್ಟ್ ಕೂಡಾ ವಿದ್ಯಾರ್ಥಿನಿಯರ ಹೋರಾಟಕ್ಕೆ ಛೀಮಾರಿ ಹಾಕಿದೆ. ಪಿಎಫ್‍ಐ ಮತ್ತು ಸಿಎಫ್‍ಐ ಸಂಘಟನೆಗಳ ಕುಮ್ಮಕ್ಕು ಮುಸ್ಲಿಂ ಸಮುದಾಯಕ್ಕೆ ಗೊತ್ತಾಗಿದೆ.

ಹೀಗಾಗಿ ಜನರು ಈ ಸಂಘಟನೆಗಳಿಗೆ ಛೀ..ಥೂ.. ಎನ್ನುತ್ತಿದ್ದಾರೆ. ಈ ವಿದ್ಯಾರ್ಥಿನಿಯರು ಸುಮ್ಮನಿದ್ದಷ್ಟು ಒಳ್ಳೆಯದು. ಅವರು ಮೌನವಾಗಿದ್ದಷ್ಟು ಅವರ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ. ಇಲ್ಲದಿದ್ದರೆ ಜನರು ಉಗಿಯುತ್ತಾರೆ. ಇನ್ನು ಕ್ರಿಯೆಗೆ ಪ್ರತಿಕ್ರಿಯೆಯನ್ನು ಹಿಂದೂ ಸಮಾಜ ಕೊಡುತ್ತಿದೆ. ಮುಸ್ಲಿಮರ ಅಹಂಕಾರಕ್ಕೆ ಹಿಂದೂಗಳು ತಕ್ಕ ಉತ್ತರ ನೀಡುತ್ತಿದ್ದಾರೆ. ಮುಸ್ಲಿಮರ ಸೊಕ್ಕನ್ನು ಸಹಿಸುವ ಹಿಂದೂ ಸಮಾಜ ಈಗ ಇಲ್ಲ ಎಂದರು.

Exit mobile version