ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೊಸ ಪಕ್ಷ ಸ್ಥಾಪನೆ!

Prashanth kishor

‘ಚುನಾವಣಾ ಕಾರ್ಯತಂತ್ರ ನಿಪುಣ’ ಎಂದೇ ದೇಶದಲ್ಲಿ ಖ್ಯಾತಿ ಗಳಿಸಿರುವ ಪ್ರಶಾಂತ್ ಕಿಶೋರ(Prashanth Kishore) ಇದೀಗ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಮೂಲಕ ಇಷ್ಟು ದಿನಗಳ ಕಾಲ ಬೇರೆ ಪಕ್ಷಗಳ ಪರ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದ ಪ್ರಶಾಂತ ಕಿಶೋರ ಇನ್ನು ಮುಂದೆ ತಮ್ಮದೇ ಪಕ್ಷದ ಕಾರ್ಯತಂತ್ರದ ಮೂಲಕ ಮತದಾರರ ಬಳಿ ಮತ ಕೇಳಲಿದ್ದಾರೆ. ಈ ಕುರಿತು ಟ್ವೀಟ್(Tweet) ಮಾಡಿರುವ ಪ್ರಶಾಂತ ಕಿಶೋರ, “ಎಲ್ಲರನ್ನೂ ಒಳಗೊಳ್ಳುವ ಜನಸ್ನೇಹಿ ನೀತಿಗಳು ಮತ್ತು ಪ್ರಜಾಪ್ರಭುತ್ವ(Democracy) ಸ್ಥಾಪಿಸುವ ನನ್ನ ಪ್ರಯತ್ನದ ಫಲವಾಗಿ ಕಳೆದ 10 ವರ್ಷಗಳ ಕಾಲ ಅಡೆತಡೆಯಿಲ್ಲದ ಆಡಳಿತಕ್ಕೆ ಅವಕಾಶ ಮುನ್ನುಡಿ ಬರೆಯಿತು.

ಈಗ ನಾನು ಪ್ರಜಾಪ್ರಭುತ್ವದ ಮಾಲೀಕರಾದ ಜನರ ಬಳಿಗೆ ಹೋಗಬೇಕಿದೆ. ಜನರ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಜನರಿಗೆ ಉತ್ತಮ ಆಡಳಿತ ನೀಡಲು ಇದು ಸರಿಯಾದ ಸಮಯ. ಹೀಗಾಗಿ ಬಿಹಾರದಿಂದಲೇ ಈ ಪ್ರಯತ್ನ ಆರಂಭವಾಗಲಿದೆ ಎಂದಿದ್ದಾರೆ.” ಇನ್ನು ಪ್ರಶಾಂತ್ ಕಿಶೋರ 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಚುನಾವಣಾ ರಣತಂತ್ರ ರೂಪಿಸಿದ್ದರು. ನಂತರದ ದಿನಗಳಲ್ಲಿ ಬಿಜೆಪಿಯಿಂದ ದೂರ ಸರಿದ ಪ್ರಶಾಂತ ಕಿಶೋರ ಡಿಎಂಕೆ. ಟಿಎಂಸಿ, ಜೆಡಿಯು ಸೇರಿದಂತೆ ಅನೇಕ ಪಕ್ಷಗಳೊಂದಿಗೆ ಕೆಲಸ ಮಾಡಿದ್ದಾರೆ.

ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳ(West Bengal) ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ(Mamata Banerjee) ಅವರ ಟಿಎಂಸಿ ಪರವಾಗಿ ಚುನಾವಣಾ ರಣತಂತ್ರ ರೂಪಿಸಿದ್ದ ಪ್ರಶಾಂತ ಕಿಶೋರ, ಟಿಎಂಸಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಬಿಜೆಪಿ ಪಕ್ಷ 100 ಸೀಟುಗಳನ್ನು ಗೆಲ್ಲುವುದಿಲ್ಲ ಎಂದು ಪ್ರಶಾಂತ್ ಕಿಶೋರ ಮೊದಲೇ ಭವಿಷ್ಯ ನುಡಿದಿದ್ದರು. ಇನ್ನು ಬಿಜೆಪಿಯನ್ನು 100 ಸೀಟುಗಳ ಒಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇತ್ತೀಚೆಗೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯೊಂದಿಗೆ ಮೂರು ಸಭೆಗಳನ್ನು ಮತ್ತು ಹಿರಿಯ ನಾಯಕರೊಂದಿಗೆ ಸಮಾಲೋಚನೆಯನ್ನು ನಡೆಸಿದ್ದರು. ಮುಂಬರುವ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಶಾಂತ ಕಿಶೋರ ಕಾರ್ಯತಂತ್ರಕ್ಕೆ ಮನ್ನಣೆ ಸಿಗದ ಹಿನ್ನಲೆ ಅವರು ಕಾಂಗ್ರೆಸ್ ಪಕ್ಷವನ್ನು ನಾನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ದೂರಸರಿದ ನಂತರ ಇದೀಗ ಹೊಸ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.

Exit mobile version