ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರದಿರಲು 5 ಪ್ರಮುಖ ಕಾರಣಗಳು ಇಲ್ಲಿವೆ ನೋಡಿ!

prashanth kishore

ಕಳೆದ ಒಂದು ತಿಂಗಳಿಂದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್(Prashanth Kishore) ಕಾಂಗ್ರೆಸ್ ಅಧ್ಯಕ್ಷೆ(Congress President) ಸೋನಿಯಾ ಗಾಂಧಿ(Sonia Gandhi) ಅವರೊಂದಿಗೆ ನಿರಂತರ ಮಾತುಕತೆಯ ನಂತರ ಇಬ್ಬರ ನಡುವಿನ ಮಾತುಕತೆ ಮುರಿದು ಬಿದ್ದಿದೆ.

‘ನಾನು ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ’ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಲಕ ಖಚಿತಪಡಿಸಿದ್ದಾರೆ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರದಿರಲು ಪ್ರಮುಖ ಐದು ಕಾರಣ ಬಗ್ಗೆ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.

ಚುನಾವಣಾ ನೀತಿ ರೂಪಿಸಲು ಮುಕ್ತ ಅವಕಾಶ ನೀಡಲಿಲ್ಲ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ ಪ್ರಶಾಂತ್ ಕಿಶೋರ್ ಕೆಲ ಪ್ರಮುಖ ಚುನಾವಣಾ ನೀತಿಗಳನ್ನು ಸೋನಿಯಾ ಗಾಂಧಿ ಮುಂದಿಟ್ಟಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪ್ರಶಾಂತ್ ಕಿಶೋರ್‍ಗೆ ಚುನಾವಣಾ ನೀತಿ ರೂಪಿಸಲು ಮುಕ್ತ ಅವಕಾಶ ನೀಡಲು ಒಪ್ಪಿಗೆ ಸೂಚಿಸಲಿಲ್ಲ. ಹೀಗಾಗಿ ತಮ್ಮ ಕಾರ್ಯತಂತ್ರಕ್ಕೆ ಪೂರಕ ವಾತಾವರಣ ಕಾಂಗ್ರೆಸ್‍ನಲ್ಲಿಲ್ಲ ಎಂದು ಕಾಂಗ್ರೆಸ್‍ನಿಂದ ಪ್ರಶಾಂತ್ ಕಿಶೋರ್ ದೂರಸರಿದರು.

ರಾಹುಲ್ ಗಾಂಧಿ ವಿರೋಧ : ಪ್ರಶಾಂತ್ ಕಿಶೋರ್‍ಗೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವುದಕ್ಕೆ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದರು. ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶಾಂತ್ ಕಿಶೋರ್‍ಗೆ ಮುಕ್ತ ಸ್ವಾತಂತ್ರ್ಯ ನೀಡಲು ಬಯಸಿದ್ದರು. ಆದರೆ ರಾಹುಲ್ ಗಾಂಧಿ ಇದನ್ನು ವಿರೋಧಿಸಿದ್ದರು ಎನ್ನಲಾಗಿದೆ.

ಹಿರಿಯ ನಾಯಕರ ಅಪಸ್ವರ : ಪ್ರಶಾಂತ್ ಕಿಶೋರ್‍ಗೆ ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ನೀಡುವುದಕ್ಕೆ ಕಾಂಗ್ರೆಸ್‍ನ ಅನೇಕ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಪ್ರಶಾಂತ್ ಕಿಶೋರ್ ಯುವಕರಿಗೆ ಮಣೆಹಾಕಲು ಚಿಂತಿಸಿದ್ದರು, ಹೀಗಾಗಿ ತಾವೆಲ್ಲಾ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಕಾರಣದಿಂದ ಹಿರಿಯರು ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವುದನ್ನು ವಿರೋಧಿಸಿದ್ದರು.

ನಾಯಕತ್ವ ಬದಲಾವಣೆಗೆ ಯಾರೂ ಒಪ್ಪಲಿಲ್ಲ : ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ನಾಯಕತ್ವ ಬದಲಾವಣೆಯಾಗಬೇಕು. ಗಾಂಧಿಯೇತರ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು. ಆ ಮೂಲಕ ಜನರ ವಿಶ್ವಾಸಗಳಿಸುವ ಪ್ರಯತ್ನ ಮಾಡಬೇಕು. ಸದ್ಯ ಗಾಂಧಿ ನಾಯಕತ್ವದ ಕುರಿತು ಜನತೆ ಆಸಕ್ತಿ ಕಳೆದುಕೊಂಡಿದ್ದಾರೆ. ಹೀಗಾಗಿ ಗಾಂಧಿಯೇತರ ನಾಯಕತ್ವ ಕಾಂಗ್ರೆಸ್ಸಿಗೆ ತುರ್ತು ಅಗತ್ಯವಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ ಗಾಂಧಿ ನಾಯಕತ್ವ ಬದಲಾವಣೆಗೆ ಯಾರೂ ಸಹಮತ ಸೂಚಿಸಲಿಲ್ಲ ಎನ್ನಲಾಗಿದೆ.

ಸೈದ್ದಾಂತಿ ಭಿನ್ನಾಭಿಪ್ರಾಯ : ಪ್ರಶಾಂತ್ ಕಿಶೋರ್ ಈಗಾಗಲೇ ತೆಲಗಾಂಣದ ಆಡಳಿತ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರೊಂದಿಗೆ ಚುನಾವಣೆ ತಂತ್ರ ರೂಪಿಸುವ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ. ಅವರು ಪ್ರತಿ ಚುನಾವಣೆ ಎದುರಾದಾಗಲೂ ಒಂದೊಂದು ಪಕ್ಷದೊಂದಿಗೆ ಕೆಲಸ ಮಾಡುತ್ತಾರೆ. ಹೀಗಾಗಿ ಅವರು ನಮ್ಮ ಪಕ್ಷದೊಂದಿಗೆ ದೀರ್ಘಕಾಲ ಕೆಲಸ ಮಾಡುತ್ತಾರೆ ಎಂಬ ಭಾವನೆ ನಮಗಿಲ್ಲ ಎಂದು ಅನೇಕ ನಾಯಕರು ಸೋನಿಯಾ ಗಾಂಧಿ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೀಗಾಗಿ ಪ್ರಶಾಂತ್ ಕಿಶೋರ್ ವಿರುದ್ದ ಕಾಂಗ್ರೆಸ್‍ನಲ್ಲಿ ಬಹುದೊಡ್ಡ ಗುಂಪೊಂದು ಕೆಲಸ ಮಾಡಲು ಶುರುಮಾಡಿತ್ತು. ಒಟ್ಟಾರೆಯಾಗಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್‍ನಿಂದ ಹಿಂದೆ ಸರಿಯಲು ಕಾಂಗ್ರೆಸ್‍ನ ಅಸಹಕಾರ ಮುಖ್ಯ ಕಾರಣ ಎನ್ನಲಾಗಿದೆ.

Exit mobile version