ಕೊರೊನಾ ಎರಡನೇ ಡೋಸ್ ಲಸಿಕೆ ಪಡೆದ ಪ್ರಧಾನಿ: ಎಲ್ಲರೂ ವ್ಯಾಕ್ಸಿನ್ ಪಡೆಯುವಂತೆ ಕೋರಿದ ಮೋದಿ

ನವದೆಹಲಿ, ಏ. 08: ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯ ಏಮ್ಸ್’ನಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ನಾನು ದೆಹಲಿಯ ಏಮ್ಸ್ ನಲ್ಲಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದೇನೆ. ಸೋಂಕು ತಡೆಗೆ ಇರುವ ಕೆಲವು ವಿಧಾನಗಳಲ್ಲಿ ವ್ಯಾಕ್ಸಿನೇಷನ್ ಕೂಡ ಒಂದಾಗಿದೆ. ನೀವು ಲಸಿಕೆಗೆ ಅರ್ಹರಾಗಿದ್ದರೆ ಶೀಘ್ರದಲ್ಲೇ CoWin.gov.in. ಮೂಲಕ ಹೆಸರು ನೋಂದಾಯಿಸಿಕೊಳ್ಳಿ ಎಂದು ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಮೋದಿ ಅವರಿಗೆ ಲಸಿಕೆ ನೀಡಿದ ಇಬ್ಬರು ದಾದಿಯಲ್ಲಿ ಒಬ್ಬರು ಪುದುಚೇರಿಯ ಪಿ. ನಿವೇದಾ ಮತ್ತು ಪಂಜಾಬ್’ನ ನಿಶಾ ಶರ್ಮಾ ಅವರಾಗಿದ್ದಾರೆ. ಈ ಹಿಂದೆ ಮಾರ್ಚ್ 1ರಂದು ಪ್ರಧಾನಿ ಮೋದಿ ಅವರು ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯನ್ನು ಮೊದಲ ಡೋಸ್ ಪಡೆದಿದ್ದರು.‌

ಪ್ರಧಾನಿ ಮೋದಿ ಅವರಿಗೆ ಲಸಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮೂಲದ ನರ್ಸ್ ನಿಶಾ ಶರ್ಮಾ, ಮೋದಿ ಅವರನ್ನು ಭೇಟಿ ಮಾಡುವ ಹಾಗೂ ಅವರಿಗೆ ವ್ಯಾಕ್ಸಿನ್ ನೀಡುವ ಅವಕಾಶ ಸಿಕ್ಕಿದ್ದು ತಮ್ಮ ವೃತ್ತಿಜೀವನದ ಅತ್ಯಂತ ಅವಿಸ್ಮರಣೀಯ ದಿನವಾಗಿದೆ ಎಂದಿದ್ದಾರೆ. ಇನ್ನೂ ಈ ಹಿಂದೆ ಮೋದಿ ಅವರಿಗೆ ಮೊದಲ ಡೋಸ್ ಲಸಿಕೆ ನೀಡಿದ್ದ ನರ್ಸ್ ನಿವೇದಾ ಮಾತನಾಡಿ, ಮೊದಲ ಡೋಸ್ ಲಸಿಕೆ ನೀಡಿದ್ದ ತಮಗೆ ಇಂದು ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಲಸಿಕೆ ನೀಡಿದ್ದು ಖುಷಿಯಾಗಿದೆ. ಈ ವೇಳೆ ಅವರೊಂದಿಗೆ ಮಾತನಾಡಿದ ನಾವು, ಫೋಟೋ ಸಹ ತೆಗೆದುಕೊಂಡೆವು ಎಂದು ಸಂತಸ ವ್ಯಕ್ತಪಡಿಸಿದರು.

Exit mobile version