ರಾಜ್ಯದ ಅಂಬುಲೆನ್ಸ್ ಬಿಟ್ಟು ಅನ್ಯ ರಾಜ್ಯದ ಅಂಬುಲೆನ್ಸ್‌ಗೆ ಆದ್ಯತೆ: ವಾಟಾಳ್ ನಾಗರಾಜ್ ಕಿಡಿ

ಬೆಂಗಳೂರು, ಫೆ. 08: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಶಿವರಾಮೇಗೌಡ ಮುಂತಾದವರು ಪ್ರತಿಭಟನೆ ನಡೆಸಿ ಅನ್ಯ ರಾಜ್ಯಗಳ ಅಂಬ್ಯುಲೆನ್ಸ್‍ಗೆ ಆದ್ಯತೆ ನೀಡಿ ಕರ್ನಾಟಕ ರಾಜ್ಯದ ಆಂಬುಲೆನ್ಸ್‍ಗಳನ್ನು ಕಡೆಗಣಿಸುತ್ತಿರುವ ಧೋರಣೆಯನ್ನು ಖಂಡಿಸಿದರು.  ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆಂಬ ಬೇಧವಿಲ್ಲದೆ ಸಾರ್ವತ್ರಿಕವಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಾ ಬಂದಿರುವ ನಮ್ಮ ರಾಜ್ಯದವರನ್ನು ಕಡೆಗಣಿಸಿ ಕಮಿಷನ್ ಆಸೆಗಾಗಿ ಅನ್ಯ ರಾಜ್ಯದ ಆಂಬ್ಯುಲೆನ್ಸ್‍ಗಳಿಗೆ ಆದ್ಯತೆ ನೀಡುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳ ಮುಖಂಡರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಸರ್ಕಾರದೊಂದಿಗೆ ಕೈ ಜೋಡಿಸಿ ಪ್ರಾಮಾಣಿಕವಾಗಿ ಆಯಂಬ್ಯುಲೆನ್ಸ್‍ನವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಆದರೆ ಸ್ಟನ್ ಪ್ಲಸ್ ರೆಡ್ ಅಂಬ್ಯುಲೆನ್ಸ್ ಎಂಬ ಕಂಪನಿಯವರು ಈಗ ಸಾವಿರಾರು ಅಂಬ್ಯುಲೆನ್ಸ್‍ಗಳನ್ನು ರಾಜ್ಯದಲ್ಲಿ ಓಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ನಮ್ಮ ರಾಜ್ಯದ ಕನ್ನಡಿಗರ ಆಯಂಬ್ಯುಲೆನ್ಸ್‍ನವರ ಬದುಕು ಬರ್ಬಾದಾಗುತ್ತದೆ. 15 ದಿನಗಳ ಕಾಲ ಗಡುವು ನೀಡುತ್ತೇವೆ. ಅಷ್ಟರೊಳಗೆ ಬೇರೆ ರಾಜ್ಯದ ಆಯಂಬ್ಯುಲೆನ್ಸ್‍ಗಳ ಸೇವೆ ತೆರವಾಗಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಯವರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದ ನಮ್ಮ ರಾಜ್ಯದ ಆಯಂಬ್ಯುಲೆನ್ಸ್ ಸೇವೆಯನ್ನೇ ಪಡೆದುಕೊಳ್ಳಬೇಕು. ಕೇವಲ ಕಮಿಷನ್ ಆಸೆಗಾಗಿ ಅನ್ಯ ರಾಜ್ಯಗಳ ಆಯಂಬ್ಯುಲೆನ್ಸ್ ಸೇವೆ ಪಡೆದು ಕನ್ನಡಿಗರ ಬದುಕಿಗೆ ಬರೆ ಎಳೆಯಬೇಡಿ ಎಂದು ಹೇಳಿದರು. ಕೊರೋನಾ ಸಂದರ್ಭದಲ್ಲಿ ಲಕ್ಷಾಂತರ ಮಂಚ ಖರೀದಿ, ವೆಂಟಿಲೇಟರ್‍ಗಳನ್ನು ಸರ್ಕಾರದಿಂದ ಖರೀದಿ ಮಾಡಲಾಗಿದೆ ಎಂದು ಹೇಳಲಾಗಿದೆ. ಅವುಗಳನ್ನು ಎಲ್ಲಿ ಇಟ್ಟಿದ್ದೀರಿ ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ ಅವರು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸಿದರು.

ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಶಶಿಕಲಾ ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಕರೆದೊಯ್ಯುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ. ಅವರೇನು ಸ್ವಾತಂತ್ರ್ಯ ಹೋರಾಟ ಮಾಡಿ, ಚಳುವಳಿ ಮಾಡಿ ಜೈಲಿಗೆ ಹೋದವರಲ್ಲ. ತಪ್ಪೆಸಗಿ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದಾರೆ. ಅವರನ್ನು ಈ ರೀತಿ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿರುವುದು ತೀವ್ರ ಖಂಡನೀಯ ಎಂದು ಹೇಳಿದರು.

ಹಣವಂತರಿಗೆ ಜೈಲೊಳಗೆ ರಾಜತಿಥ್ಯ ಸಿಗುತ್ತದೆ. ಬಿಡುಗಡೆಯಾದ ಮೇಲೂ ವೈಭವದ ಮೆರವಣಿಗೆ ಎಲ್ಲವೂ ಆಗುತ್ತದೆ ಎಂದು ಹೇಳಿದರು. ಸಾ.ರಾ.ಗೋವಿಂದು ಮಾತನಾಡಿ, ಸ್ಟನ್ ಪ್ಲಸ್ ರೆಡ್ ಅಂಬ್ಯುಲೆನ್ಸ್ ಕಂಪನಿಯನ್ನು ಕರ್ನಾಟಕದಿಂದ ಕೂಡಲೇ ನಿಷೇಧಿಸಬೇಕು.

ಈ ಮೂಲಕ ರಾಜ್ಯದ ಆಯಂಬ್ಯುಲೆನ್ಸ್ ಅವರಿಗೆ ಅನುಕೂಲ ಕಲ್ಪಿಸಿಕೊಡಬೇಕು. 2 ಸಾವಿರಕ್ಕೂ ಹೆಚ್ಚು ಆಯಂಬ್ಯುಲೆನ್ಸ್ ಅವರು ಈ ವೃತ್ತಿಯನ್ನು ನಂಬಿ ಬದುಕುತ್ತಿದ್ದಾರೆ. ಏಕಾಏಕಿ ಅನ್ಯ ರಾಜ್ಯದವರು ಬಂದರೆ ಇವರು ಬೀದಿ ಪಾಲಾಗುತ್ತಾರೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಇದರ ಪರ ನಿಂತು ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಅಖಿಲ ಕರ್ನಾಟಕ ಆಯಂಬ್ಯುಲೆನ್ಸ್ ಓನರ್ಸ್ ವೆಲ್‍ಫೇರ್ ಅಸೋಸಿಯೇಷನ್‍ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Exit mobile version