ಹಂಸಲೇಖ ಪರ ಬ್ಯಾಟಿಂಗ್‌ ನಡೆಸಿದ ಪ್ರಿಯಾಂಕ ಖರ್ಗೆ

ಬೆಂಗಳೂರು ನ 26 : ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಪ್ರಿಯಾಂಕ್​ ಖರ್ಗೆ, ಹಂಸಲೇಖ ಪರ ಮಾತನಾಡಿದ್ದಾರೆ.

ಹಂಸಲೇಖ ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಕೆಲವು ಮನುವಾದಿಗಳು ವಿರೋಧ ಮಾಡುತ್ತಿದ್ದಾರೆ ಅಷ್ಟೇ. ಅವರು ಸಂವಿಧಾನ ವಿರುದ್ಧ ಇದ್ದಾರೆ. ಎಲ್ಲಿವರೆಗೆ ಜನರಲ್ಲಿ ಮನುವಾದಿ ಸಂಸ್ಕೃತಿ ಇರುತ್ತೋ, ಅಲ್ಲಿಯವರೆಗೆ ಇಂತಹ ಹೋರಾಟಗಳು ಇರುತ್ತವೆ. ಒಬ್ಬಬ್ಬರ ಆಹಾರ ಪದ್ಧತಿ ಒಂದೊಂದು ರೀತಿ ಇರುತ್ತದೆ. ಅವರ ಕುಲಕಸಬು ಹೇಗಿರುತ್ತದೋ ಹಾಗೆಯೇ ಆಹಾರ ಪದ್ಧತಿ ಇರುತ್ತದೆ. ಈ ಆಹಾರ ಸೇವಿಸಿ, ಈ ಆಹಾರ ಬೇಡ ಅಂತ ಹೇಳೋಕೆ ನಾನು ಯಾರು? ಮಾಂಸ ತಿನ್ನೋದು ತಪ್ಪಾ ಎಂದರು.

ಕೆಲವರು ಒಪ್ಪಬಹುದು, ಕೆಲವರು ಒಪ್ಪದೆ ಇರಬಹುದು. ಹಾಗಂತ ನಂದೇ ಸರಿ ಅಂತ ಹೇಳಲು ಆಗಲ್ಲ. ಬಿಜೆಪಿಯವರು ದಲಿತರ ಮನೆಗೆ ಹೋಗಿ ಹೋಟೆಲ್​ನಿಂದ​ ಊಟ ತರಿಸಿ ತಿನ್ನಲ್ವಾ ಎಂದು ಪ್ರಶ್ನಿಸಿದರು. ಬಿಜೆಪಿಯವರು ಹಿಂದುಳಿದವರು, ದಲಿತರು, ಮಹಿಳೆಯರು ಹಾಗೂ ಯುವಕರ ಪರವಾಗಿ ಇಲ್ಲ ಎಂದರು.

Exit mobile version