ಕೈ ಮುಗಿದು ಕ್ಷಮೆ ಕೇಳಿದ ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಡಿಜೆ ಸಿದ್ಧಾರ್ಥ್!

dj

ಫೆಬ್ರವರಿ 06 ಭಾನುವಾರ ಬೆಂಗಳೂರಿನ ಕೋರಮಂಗಲದಲ್ಲಿ ರುವ ‘ಬದ್ಮಾಶ್ ಹ್ಯಾಂಗೋವರ್’ ಪಬ್ ನ ಡಿಜೆ ಒಬ್ಬ ಕನ್ನಡ ಹಾಡನ್ನು ಪ್ಲೇ ಮಾಡಿ ಎಂದಿದ್ದಕ್ಕೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕನ್ನಡಿಗರಿಗೆ, ಕನ್ನಡ ಭಾಷೆಗೆ ಅಪಮಾನಿಸಿದ್ದಕ್ಕೆ ಆತನ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. ಪಬ್ಗೆ ಬಂದಿದ್ದ ಕೆಲ ಕನ್ನಡಿಗರು ಕನ್ನಡ ಹಾಡನ್ನು ಕೇಳಲು ಬಯಸಿದ್ದಾರೆ. ಆದರೆ ಡಿಜೆ ನಿರಂತರವಾಗಿ ಬೇರೆ ಭಾಷೆಗಳ ಹಾಡುಗಳನ್ನೇ ಪ್ಲೇ ಮಾಡುತ್ತಿದ್ದದ್ದನ್ನು ಗಮನಿಸಿದ ಕನ್ನಡಿಗರು, ಶೀಘ್ರವೇ ಡಿಜೆ ಸಿದ್ಧಾರ್ಥ್ ಬಳಿ ಬಂದು ಕನ್ನಡ ಹಾಡನ್ನೂ ಕೂಡ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಸಮಯ ಮುಗಿದಿದೆ, ನಾನು ಪ್ಲೇ ಮಾಡೋದಿಲ್ಲ ಎಂದು ನಿರಾಕರಿಸಿದ್ದಕ್ಕೆ ತೀವ್ರ ಆಕ್ರೋಶಗೊಂಡ ಕನ್ನಡಿಗರು, ಆತನ ವಿರುದ್ಧ ದೂರು ಸಲ್ಲಿಸಿದರು.

ಈ ಕುರಿತು ತಾನು ಮಾಡಿರುವುದು ತಪ್ಪು ಎಂಬುದು ಅರಿವಾಗಿ, ಸಾಮಾಜಿಕ ಜಾಲತಾಣದಲ್ಲಿರುವ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಮಾಡಿದ ತಪ್ಪಿಗೆ ಕ್ಷಮೆಯನ್ನು ಕೋರಿ ಪೋಸ್ಟ್‌ ಮಾಡಿಕೊಂಡಿದ್ದಾನೆ. ಆತ ಬರೆದಿರುವ ಪೋಸ್ಟ್‌ ಹೀಗಿದೆ. “ನನ್ನ ಹೆಸರು ಸಿದ್ಧಾರ್ಥ್ ನಾನು 5 ವರ್ಷದಿಂದ ಸಂಗೀತ ಕ್ಷೇತ್ರದಲ್ಲಿದ್ದೇನೆ, ಡಿಜೆಯನ್ನು ನಡೆಸುತ್ತಿದ್ದೇನೆ. ನಾನು ಹುಟ್ಟಿ ಬೆಳೆದಿದ್ದು ಹಾಗೂ ಶಾಲೆಯನ್ನು ಕಲಿತಿದ್ದು ಎಲ್ಲಾ ಬೆಂಗಳೂರಿನಲ್ಲೇ. ನಾನು ಕನ್ನಡಿಗನೇ ಆಗಿದ್ದೇನೆ. ನಾನು ನನ್ನೆಲ್ಲಾ ಪಾರ್ಟಿಗಳಲ್ಲಿ ಅಪ್ಪು ಸರ್ ಅವರ ಹಾಡನ್ನು, ಕನ್ನಡ ಹಾಡುಗಳನ್ನೇ ನುಡಿಸಿದ್ದೇನೆ.

ನಿನ್ನೆ ದಿನ ರಾತ್ರಿ ಕೂಡ ನಾನು ಕನ್ನಡ ಹಾಡನ್ನು ಹಾಕಬೇಕಿತ್ತು. ಆದರೆ ಪಬ್ ಮ್ಯಾನೇಜ್ಮೆಂಟ್ ಅವರು 1 ಗಂಟೆ ಒಳಗೆ ಪಬ್ಬನ್ನು ಮುಚ್ಚಬೇಕು ಬೇಗ ಮುಗಿಸಿ ಎಂದು ಹೇಳಿದರು. ಸಮಯದ ಅಭಾವ ಆಯ್ತು ಆದ್ದರಿಂದ 12:30 ರವರೆಗೆ ಕಾರ್ಯಕ್ರಮವನ್ನು ಮುಗಿಸಲಾಯಿತು. ಆದ್ದರಿಂದ ಕನ್ನಡ ಹಾಡನ್ನು ಹಾಕಲು ಆಗಲಿಲ್ಲ. ಆದ್ದರಿಂದ ನಾನು ದಯವಿಟ್ಟು ಕ್ಷಮೆಯನ್ನು ಕೇಳುತ್ತೇನೆ. ನಾನು ಎಲ್ಲ ಮಾಧ್ಯಮದವರನ್ನು ಹಾಗೂ ಕನ್ನಡಪರ ಸಂಘಟನೆಗಳು ಗೌರವದಿಂದ ಕಾಣುತ್ತೇನೆ ಹಾಗೂ ನಿನ್ನೆ ನಡೆದ ಘಟನೆಯ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ನಾನು ಎಲ್ಲ ಮಹಿಳೆಯರನ್ನು ಗೌರವದಿಂದ ಕಾಣುತ್ತೇನೆ. ನನ್ನಿಂದ ತಪ್ಪಾಗಿದೆ ನನ್ನನ್ನು ಕ್ಷಮಿಸಿ. ಎಲ್ಲರಲ್ಲೂ ಕ್ಷಮೆ ಕೇಳುತ್ತಿದ್ದೇನೆ ಎಂದು ಬರೆದು ಕ್ಷಮೆಯಾಚಿಸಿದ್ದಾನೆ.

Exit mobile version