ಗ್ಯಾರಂಟಿ ಜಾರಿ ಸಮಿತಿ ಅಲ್ಲ, ಅತೃಪ್ತರಿಗೆ ಗೂಟದ ಕಾರು ಗ್ಯಾರಂಟಿ ನೀಡುವ ಸಮಿತಿ: ಆರ್.ಅಶೋಕ್ ವಾಗ್ದಾಳಿ

Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಮೂರೂ ಹಂತಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು ಎಂದು ಘೋಷಣೆ ಮಾಡಿರುವ ಬೆನ್ನಲ್ಲೇ ವಿಧಾನಸಭೆ ವಿಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ಅದು ಗ್ಯಾರಂಟಿ ಜಾರಿ ಸಮಿತಿ ಅಲ್ಲ, ಅತೃಪ್ತ ಶಾಸಕರಿಗೆ ಗೂಟದ ಕಾರು ಗ್ಯಾರಂಟಿ ನೀಡುವ ಸಮಿತಿ ಎಂದು ವ್ಯಂಗ್ಯವಾಡಿದ್ದಾರೆ.

ಈಗಾಗಲೇ ಅವೈಜ್ಞಾನಿಕ ಗ್ಯಾರಂಟಿಗಳ (Guarantee) ಭಾರವನ್ನ ಹೊರಲಾಗದೆ ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ ಎಂಬ ಗಾದೆ ಮಾತಿನಂತೆ ಬೆನ್ನು ಮೂಳೆ ಮುರಿದಂತಾಗಿರುವ ಸರ್ಕಾರಕ್ಕೆ ಗ್ಯಾರಂಟಿ ಜಾರಿ ಸಮತಿ ಎಂಬ ಮತ್ತೊಂದು ಹೊರೆ ಹೊರಿಸಲು ಹೊರಟಿದ್ದಾರೆ ಸಿಎಂ ಸಿದ್ದರಾಮಯ್ಯನವರು ಎಂದು ವಾಗ್ದಾಳಿ ನಡೆಸಿದ್ದಾರೆ.

ಗ್ಯಾರಂಟಿ ಜಾರಿಗೆ ಮುಖ್ಯಮಂತ್ರಿ ಆದಿಯಾಗಿ, 34 ಕ್ಯಾಬಿನೆಟ್ (Cabinet) ಸಚಿವರು, ಆರ್ಥಿಕ,ರಾಜಕೀಯ, ಮಾಧ್ಯಮ ಸಲಹೆಗಾರರು, ಜಿಲ್ಲಾಡಳಿತಗಳು ಸೇರಿದಂತೆ ಇಡೀ ಆಡಳಿತ ಯಂತ್ರವೇ ಇರುವಾಗ ಪ್ರತ್ಯೇಕ ಸಮಿತಿಯ ಅಗತ್ಯ ಏನಿದೆ? ಸಂಪುಟ ದರ್ಜೆ ಸ್ಥಾನಮಾನದ ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನದ ಐವರು ಉಪಾಧ್ಯಕ್ಷರು ಸೇರಿದಂತೆ 31 ಸದಸ್ಯರ ಸಮಿತಿಯ ಸಂಬಳ ಸಾರಿಗೆ ಖರ್ಚಿನಿಂದ ರಾಜ್ಯ ಸರ್ಕಾರಕ್ಕೆ 16 ಕೋಟಿ ರೂಪಾಯಿ ಹೊರೆಯಾಗಲಿದೆ. ಎಂದು ಪ್ರಶ್ನಿಸಿದ್ದಾರೆ.

ತಮ್ಮ ಪಕ್ಷದ ಅತೃಪ್ತ ಶಾಸಕರನ್ನು, ಪ್ರಮುಖ ಕಾರ್ಯಕರ್ತರನ್ನು ಲೋಕಸಭಾ ಚುನಾವಣೆಯ (Loksabha Election) ಕೆಲಸಕ್ಕೆ ಬಳಸಿಕೊಳ್ಳಲು ರಾಜ್ಯದ ಸಾರ್ವಜನಿಕ ಹಣ ಏಕೆ ದುರ್ಬಳಕೆ ಮಾಡುತ್ತೀರಿ. ಗ್ಯಾರಂಟಿ ಜಾರಿಯೇ ಹೊರೆಯಾಗಿ ಅಭಿವೃದ್ಧಿಗೆ ಹಣ ಇಲ್ಲದಿರುವಾಗ ಕಂಡ ಕಂಡವರಿಗೆ ಗೂಟದ ಕಾರು ಕೊಡಲು ರಾಜ್ಯದ ಖಜಾನೆ ಏನು ಕಾಂಗ್ರೆಸ್ ಪಕ್ಷದ ಆಸ್ತಿ ಎಂದುಕೊಂಡಿದ್ದೀರಾ? ಎಂದು ವ್ಯಂಗ್ಯವಾಡಿದ್ದಾರೆ.

ಸಚಿವರು, ಆಡಳಿತ ಯಂತ್ರದ ಮೂಲಕ ಗ್ಯಾರಂಟಿ ಜಾರಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಸುಮ್ಮನೆ ರಾಜ್ಯದ ಬೊಕ್ಕಸವನ್ನ ಪೋಲು ಮಾಡಬೇಡಿ ಎಂದು ಅಶೋಕ ಕಿಡಿಕಾರಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version