ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‍ನಂತೆ ಹೋರಾಡಲು ಸಾಧ್ಯವಿಲ್ಲ : ರಾಹುಲ್ ಗಾಂಧಿ!

congress

ಬಿಜೆಪಿಯ(BJP) ಕೋಮುವಾದ ಸಿದ್ದಾಂತದ ವಿರುದ್ದ ಹೋರಾಡುವ ಶಕ್ತಿ ಪ್ರಾದೇಶಿಕ ಪಕ್ಷಗಳಿಗೆ ಇಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ(Congress Party) ಮಾತ್ರ ಬಿಜೆಪಿಯ ದ್ವೇಷ ಸಿದ್ದಾಂತದ ವಿರುದ್ದ ಹೋರಾಟ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ.


ರಾಜಸ್ಥಾನದ(Rajasthan) ಉದಯಪುರದಲ್ಲಿ(Udaipur) ಇತ್ತೀಚೆಗೆ ನಡೆದ ಮೂರು ದಿನಗಳ ಚಿಂತನಾ ಶಿಬಿರದಲ್ಲಿ ಹಲವು ನಿರ್ಣಯಗಳನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಂಡಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಈಗ ಸಾಮಾನ್ಯ ಜನರೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ. ನಮ್ಮ ಜನರೊಂದಿಗಿನ ಬಂಧವು ಕಳಚಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಆದರೆ ನಾವು ಮತ್ತೆ ಜನರೊಂದಿಗೆ ಸಂಪರ್ಕ ಸಾಧಿಸುತ್ತೇವೆ. ಇದಕ್ಕೆ ಯಾವುದೇ ಅಡ್ಡ ದಾರಿಯಿಲ್ಲ.

ಕಠಿಣ ಶ್ರಮದೊಂದಿಗೆ ಪಕ್ಷವನ್ನು ಸಂಘಟಿಸುತ್ತೇವೆ. ತಳಮಟ್ಟದಲ್ಲಿ ನಮ್ಮ ಪಕ್ಷವನ್ನು ಆಕ್ರಮಣಕಾರಿಯಾಗಿ ಬದಲಾಯಿಸಿದಾಗ ಮಾತ್ರ ನಾವು ಬಿಜೆಪಿ ಮತ್ತು ಆರ್‍ಎಸ್‍ಎಸ್‍ನ ದ್ವೇಷ ರಾಜಕೀಯವನ್ನು ಎದುರಿಸಲು ಸಾಧ್ಯ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
ಇನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ದ ಸಂಘಟಿತ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿಯ ಹುಳುಕುಗಳನ್ನು ಮತ್ತು ಮೋದಿ ಸರ್ಕಾರದ ವೈಪಲ್ಯಗಳನ್ನು ಬಯಲು ಮಾಡಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬೃಹತ್ ‘ಭಾರತ್ ಜೋಡೋ’ ಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

ಮುಂಬರುವ ಗಾಂಧಿ ಜಯಂತಿಯಂದು ಈ ಪಾದಯಾತ್ರೆಗೆ ಚಾಲನೆ ದೊರೆಯಲಿದೆ ಎನ್ನಲಾಗಿದೆ. ಈ ಇಡೀ ಪಾದಯಾತ್ರೆಯ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಿಕೊಳ್ಳಲಿದ್ದು, ದೇಶಾದ್ಯಂತ ಒಂದು ವರ್ಷಗಳ ಕಾಲ ಪಾದಯಾತ್ರೆ ನಡೆಸಲಿದ್ದಾರೆ. ದೇಶದ ಹಲವು ಕಡೆ ‘ಜನತಾ ದರ್ಬಾರ್’ ನಡೆಸಿ, ಸಾರ್ವಜನಿಕ ಅಭಿಪ್ರಾಯವನ್ನು ಒಗ್ಗೂಡಿಸುವ ಕಾರ್ಯ ನಡೆಯಲಿದೆ.

ಇನ್ನು 2024ರ ಲೋಕಸಭಾ ಚುನಾವಣೆ ಪೂರ್ವ ತಯಾರಿಗಾಗಿ ಕಾಂಗ್ರೆಸ್ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಹೆಚ್ಚು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ.

Exit mobile version