ಹಿಟ್ಲರ್(Hitler) ಕೂಡಾ ಚುನಾವಣೆ(Election) ಗೆದ್ದು ಬಂದಿದ್ದ, ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ. ಜರ್ಮನಿಯ(Germany) ಎಲ್ಲಾ ಸಂಸ್ಥೆಗಳನ್ನು ಬಳಸಿಕೊಂಡು, ಸೇನಾಪಡೆಗಳನ್ನು ವಶದಲ್ಲಿಟ್ಟುಕೊಂಡು, ಸಂಪೂರ್ಣ ವ್ಯವಸ್ಥೆಯನ್ನೇ ಹಿಡಿತದಲ್ಲಿಟ್ಟುಕೊಂಡು ಹಿಟ್ಲರ್ ಚುನಾವಣೆಗಳನ್ನು ಗೆಲ್ಲುತ್ತಿದ್ದ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ(Delhi) ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿನ ಕೆಟ್ಟ ಸ್ಥಿತಿ, ತೀವ್ರ ಬೆಲೆ ಏರಿಕೆ, ಐತಿಹಾಸಿಕ ನಿರುದ್ಯೋಗ, ತಮ್ಮ ನೀತಿಗಳಿಂದಾದ ವಿನಾಶದಿಂದ ಈ ಸರ್ವಾಧಿಕಾರಿ(Dictatorship) ಸರ್ಕಾರ ಹೆದರುತ್ತಿದೆ. ಸತ್ಯಕ್ಕೆ ಹೆದರುವವರು ಮಾತ್ರವೇ ತಮ್ಮ ವಿರುದ್ಧ ಧ್ವನಿ ಎತ್ತುವವರಿಗೆ ಬೆದರಿಕೆ ಹಾಕುತ್ತಾರೆ. ನಾವು ಬೆಲೆ ಏರಿಕೆ, ನಿರುದ್ಯೋಗ, ವಿಭಜನಾ ನೀತಿ ಸೇರಿದಂತೆ ಜನರಿಗೆ ಸಂಬಂಧಿಸಿದ ವಿಷಯಗಳ ಮೇಲೆ ಸದನದ ಒಳಗೂ – ಹೊರಗೂ ಚರ್ಚೆ ಮಾಡಲು ಬಯಸುತ್ತೇವೆ.
ಆದರೆ ಈ ಸರ್ಕಾರ ನಮಗೆ ಸದನದಲ್ಲಿ ಮಾತನಾಡಲು ಬಿಡುತ್ತಿಲ್ಲ. ಚರ್ಚೆಗೆ ಅವಕಾಶ ನೀಡುವುದಿಲ್ಲ, ಮಾತನಾಡಿದರೆ ನಮ್ಮನ್ನು ಬಂಧಿಸುತ್ತಾರೆ. ಇದು ದೇಶದ ಸದ್ಯದ ಪರಿಸ್ಥಿತಿ ಎಂದು ಟೀಕಿಸಿದ್ದಾರೆ.
70 ವರ್ಷಗಳ ಕಾಲ ಈ ದೇಶವನ್ನು ಕಟ್ಟಲಾಗಿದೆ. ಆದರೆ ಕೇವಲ 8 ವರ್ಷಗಳಲ್ಲಿ ಅದನ್ನು ನಾಶ ಮಾಡಲಾಗಿದೆ. ಈಗ ದೇಶದಲ್ಲಿ ಪ್ರಜಾಪ್ರಭುತ್ವ(Democracy) ಇಲ್ಲ. ದೇಶದಲ್ಲಿ ನಾಲ್ಕು ಜನರ ಸರ್ವಾಧಿಕಾರವಿದೆ ಪೆಟ್ರೋಲ್, ಡೀಸೆಲ್ಗಳ ಬೆಲೆ ಏರಿಕೆ ಬಗ್ಗೆ ಮೋದಿಯವರು ‘ಮನ್ ಕಿ ಬಾತ್’ ಆಡುವುದೇ ಇಲ್ಲ. ಅವರ ಪಕ್ಷವೂ ಕೂಡ ಮೌನಕ್ಕೆ ಜಾರುತ್ತದೆ.

ಇಂಧನ, ತೈಲಗಳ ಮೇಲಿನ ತೆರಿಗೆ(Tax) ಏರಿಸಿ ಬಡವರ ಸುಲಿಗೆ ಮಾಡುವುದನ್ನೇ ಸಾಧನೆ ಎಂದುಕೊಂಡಿರುವ ಸರ್ಕಾರ ಎಂದಿಗೂ ಜನಪರವಾಗಿ ಯೋಚಿಸಲಾರದು. ಏಕೆಂದರೆ ಅವರಿಗೆ ‘ಸುಲಿಗೆ’ಯೇ ಸಾಧನೆ ಎಂದು ಟೀಕಿಸಿದ್ದಾರೆ. ಡಾಲರ್(Dollar) ಎದುರು ರೂಪಾಯಿ(Rupee) ಐತಿಹಾಸಿಕವಾಗಿ ದಾಖಲೆ ಮಟ್ಟದಲ್ಲಿ ಕುಸಿದಿದೆ, ಮೋದಿಯವರ 8 ವರ್ಷಗಳ ಅವಧಿಯಲ್ಲಿ ರೂಪಾಯಿ ಕುಸಿತದ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ವೈಫಲ್ಯ ಮುಚ್ಚಿಕೊಳ್ಳಲು ‘ಮೌನ’ ಪರಿಹಾರ, ದುರಾಡಳಿತ ಮುಚ್ಚಿಕೊಳ್ಳಲು ‘ಮಾತು’ ಪರಿಹಾರ ಎಂದುಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.