ಚಾ.ನಗರ ಕೋವಿಡ್‌ ಸೋಂಕಿತರ ಸಾವಿನ ಪ್ರಕರಣ: ಘಟನೆ ಕುರಿತು ರಾಹುಲ್‌ ಗಾಂಧಿ ಟ್ವೀಟ್‌

ಬೆಂಗಳೂರು, ಮೇ. 03: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿತರು ಮೃತಪಟ್ಟ ಘಟನೆ ದೆಹಲಿ ಅಂಗಳಕ್ಕೆ ತಲುಪಿದ್ದು, ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ, ಇದು ಸಾವೋ ಅಥವಾ ಕೊಲೆಯೋ ಎಂದು ಪ್ರಶ್ನೆ ಮಾಡಿದ್ದಾರೆ. ಈ ದುರಂತದಂತೆ ಮತ್ತಷ್ಟು ಜನ ಬಳಲಬೇಕು.? ಮಲಗಿರುವ ವ್ಯವಸ್ಥೆ ಎದ್ದೇಳಬೇಕು ಎಂದು ಸರ್ಕಾರಕ್ಕೆ ಚಾಟಿ ಬೀಸಿರುವ ರಾಹುಲ್ ಗಾಂಧಿ, ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಇದರೊಂದಿಗೆ ಗಡಿಜಿಲ್ಲೆ ಚಾಮರಾಜನಗರದ ಆಕ್ಸಿಜನ್ ದುರಂತ, ರಾಷ್ಟ್ರ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಸಿಎಂ ಅವರಿಂದ ಮಾಹಿತಿ:
ಈ ನಡುವೆ ಆಕ್ಸಿಜನ್ ಕೊರತೆಯಿಂದ 23 ಜನ ಕೊರೊನಾ ಸೋಂಕಿತರು ಮೃತರಾಗಿರುವ ಕುರಿತು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರಿಂದ ಮಾಹಿತಿ ಪಡೆದಿದ್ದಾರೆ. ದೂರವಾಣಿ ಮೂಲಕ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ ಸಿಎಂ, ಘಟನೆ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗೆ ಕರೆ ಮಾಡಿದ ಅವರು ದುರಂತ ಹಾಗೂ ಅದಕ್ಕೆ ಕಾರಣ ಕುರಿತಾಗಿ ವಿವರಗಳನ್ನು ಪಡೆದುಕೊಂಡರು.

ಇನ್ನೂ ಚಾಮರಾಜನಗರದಲ್ಲಿ ಸಂಭವಿಸಿದ ಈ ಘಟನೆಗೆ ಮೈಸೂರು ಜಿಲ್ಲಾಡಳಿತ ಕಾರಣ ಎಂಬ ಆರೋಪ ಕೇಳಿ ಬಂದಿದ್ದು, ಮೈಸೂರು ಜಿಲ್ಲಾಡಳಿಯ ಸೂಕ್ತ ಸಮಯಕ್ಕೆ ಆಕ್ಸಿಜನ್‌ ಪೂರೈಸಲಿಲ್ಲ ಎನ್ನಲಾಗಿದೆ. ಆದರೆ ಈ ಆರೋಪ ತಳ್ಳಿಹಾಕಿರುವ ಜಿಲ್ಲಾಡಳಿತ, ಆಕ್ಸಿಜನ್ ಕೊರತೆ ಉಂಟಾದ ಬೆನ್ನಲ್ಲೇ ಭಾನುವಾರ ರಾತ್ರಿ 12.30ರ ವೇಳೆಯಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು‌ 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿ ಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಅದು ಸೂಕ್ತ ಸಮಯದಲ್ಲಿ ಬರಲಿಲ್ಲ ಎನ್ನಲಾಗಿದೆ. ಆದರೆ ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಅಧಿಕೃತವಾಗಿ 250 ಆಕ್ಸಿಜನ್ ಸಿಲಿಂಡರ್‌ಗಳನ್ನ ಮಧ್ಯರಾತ್ರಿ ವೇಳೆಗೆ ಕಳಿಸಿರೋದು ದಾಖಲೆಯಲ್ಲಿದೆ ಎಂದು ಮೈಸುರು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

Exit mobile version