ಹೊಸದಿಲ್ಲಿ, ಜ. 13: ಕೇಂದ್ರ ಸರ್ಕಾರಕ್ಕೆ ರೈತರು ಹುತಾತ್ಮರಾದಾಗ ಆಗದ ಅವಮಾನ ಟ್ರ್ಯಾಕ್ಟರ್ ಪೆರೇಡ್ನಿಂದ ಆಗುತ್ತದಾ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗಣರಾಜ್ಯೋತ್ಸವದ ದಿನ ನೂತನ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ದೆಹಲಿ ಮತ್ತಿತರ ಕಡೆಗಳಲ್ಲಿ ಟ್ರ್ಯಾಕ್ಟರ್ ಪೆರೇಡ್ ಮಾಡುವುದಾಗಿ ರೈತರು ಎಚ್ಚರಿಸಿದ್ದಾರೆ. ಆದರೆ ಈ ಬಗ್ಗೆ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿರುವ ಕೇಂದ್ರ, ಇದರಿಂದಾಗಿ ಕೇಂದ್ರಕ್ಕೆ ಅವಮಾನವಾಗುತ್ತದೆ ಎಂದು ಉಲ್ಲೇಖಿಸಿದೆ. ರೈತರ ಸಾವಿನಿಂದ ಅವಮಾನ ಆಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ೬೦ಕ್ಕೂ ಹೆಚ್ಚು ರೈತರು ಸತ್ತಿರುವ ಬಗ್ಗೆ ಮಾಹಿತಿ ಇದೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದರೆ ಇನ್ನು ಕೆಲವರು ಚಳಿ ತಾಳಲಾರದೆ ಅಸುನೀಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡದ ಕೇಂದ್ರ ಈಗ ಟ್ರ್ಯಾಕ್ಟರ್ ಪೆರೇಡ್ ಅನ್ನು ಅವಮಾನ ಎಂದು ಪರಿಗಣಿಸಿರುವುದು ಖಂಡನೀಯ ಎಂದಿದ್ದಾರೆ.