ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

ನವದೆಹಲಿ ಅ 25 : ಭಾರತೀಯ ಚಲನಚಿತ್ರ ರಂಗದಲ್ಲಿ ತನ್ನ ಅದ್ಭುತ ನಟನೆಯ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ತಮಿಳುನಟ ರಜನಿಕಾಂತ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಹುಭಾಷಾ ನಟರಾಗಿರುವ ರಜನಿಕಾಂತ್ ಅವರಿಗೆ 51 ನೇ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ನವದೆಹಲಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿ ಸನ್ಮಾನಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಜನಿಕಾಂತ್ ಅವರು, ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ರಾವ್, ಸಾರಿಗೆ ಸಹೋದ್ಯೋಗಿ ಮತ್ತು ಸ್ನೇಹಿತ ರಾಜ್ ಬಹದ್ದೂರ್, ತಮ್ಮ ಅಭಿಮಾನಿಗಳು, ಚಲನಚಿತ್ರ ನಿರ್ಮಾಪಕರು, ಸಹೋದ್ಯೋಗಿಗಳು ಮತ್ತು ಐದು ದಶಕಗಳಲ್ಲಿ ಅವಿರತ ಬೆಂಬಲ ನೀಡಿದ ತಮಿಳು ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ನಾನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗುತ್ತಿದೆ. ತಮಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ಧನ್ಯವಾದಗಳು ಎಂದು ರಜನಿಕಾಂತ್ ಅವರು ಹೇಳಿದ್ದಾರೆ.

ನಾನು ಈ ಪ್ರಶಸ್ತಿಯನ್ನು ನನ್ನ ಗುರು ಕೆ ಬಾಲಚಂದರ್ ಸರ್ ಅವರಿಗೆ ಅರ್ಪಿಸುತ್ತೇನೆ, ನನ್ನ ಸಹೋದರ ಸತ್ಯನಾರಾಯಣ ರಾವ್ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ, ಅವರು ತಂದೆಯ ಸ್ಥಾನದಲ್ಲಿದ್ದು ನನಗೆ ಉತ್ತಮ ಮೌಲ್ಯಗಳನ್ನು ಕಲಿಸಿದ್ದಾರೆ. ನನ್ನ ಸ್ನೇಹಿತ, ಚಾಲಕ ಮತ್ತು ಸಾರಿಗೆ ಸಹೋದ್ಯೋಗಿ ರಾಜ್ ಬಹದ್ದೂರ್ ಅವರು ನನ್ನಲ್ಲಿರುವ ನಟನಾ ಪ್ರತಿಭೆಯನ್ನು ಗುರುತಿಸಿ ಸಿನಿಮಾ ಸೇರುವಂತೆ ಪ್ರೋತ್ಸಾಹಿಸಿದರು ಎಂದು ರಜನಿಕಾಂತ್ ನೆನಪಿಸಿಕೊಂಡರು.

ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಅವರು ನಟನೆಯಲ್ಲಿ 45 ವರ್ಷಗಳ ಅನುಭವವನ್ನು ಹೊಂದಿದ್ದು, ಭಾರತದ ಚಿತ್ರರಂಗದಲ್ಲಿ ಹಿರಿಯ ಬಹುಭಾಷಾ ನಟರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Exit mobile version