ರಾಜ್ಯ ಸಂಸದರೊಬ್ಬರ ವಿರುದ್ಧ ಹೈದರಾಬಾದ್‌ನಲ್ಲಿ ಎಫ್ ಐಆರ್

ಹೈದರಾಬಾದ್​, ನ.​ 26: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಪಶ್ಚಿಮ ಬಂಗಾಳ ಘಟಕ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಈ ಸಭೆಯನ್ನು ಅನುಮತಿ ಪಡೆಯದೆ ಆಯೋಜಿಸಿದ್ದ ಕಾರಣ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು.

ಇದರ ಬೆನ್ನಲ್ಲೇ ಹೈದರಾಬಾದ್​ ಕಾರ್ಪೋರೇಷನ್ ಚುನಾವಣಾ ಪ್ರಚಾರಕ್ಕೆ ತೆರಳಿರುವ ಸಂಸದ ತೇಜಸ್ವಿ ಸೂರ್ಯ ಅಲ್ಲಿ ತಮ್ಮ ಬೆಂಬಲಿಗರ ಜೊತೆಗೆ ಉಸ್ಮಾನಿಯ ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸಿದ್ದಾರೆ. ಅಲ್ಲದೆ, ಕಲಾ ವಿಭಾಗದ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಅವರ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. 

ಮುನ್ಸಿಪಾಲಿಟಿ ಚುನಾವಣೆಯ ಪ್ರಯುಕ್ತ ಪಕ್ಷದ ಪ್ರಚಾರದಲ್ಲಿ ಭಾಗವಹಿಸಲು ಹೈದರಾಬಾದ್‌ಗೆ ಆಗಮಿಸಿದ್ದ ತೇಜಸ್ವಿ ಸೂರ್ಯ ಎನ್‌ಸಿಸಿ ಗೇಟ್‌ ಬಳಿ ಅಡೆತಡೆಗಳನ್ನು ಮುರಿದು ತಮ್ಮ ಬೆಂಬಲಿಗರೊಂದಿಗೆ ವಿಶ್ವವಿದ್ಯಾಲಯದ ಆವರಣಕ್ಕೆ ಪ್ರವೇಶಿಸಿದ್ದರು. ನಂತರ ಅವರು ಆರ್ಟ್ಸ್ ಕಾಲೇಜಿನಲ್ಲಿ ಭಾಷಣ ಮಾಡಿದರು. ಉಸ್ಮಾನಿಯಾ ವಿವಿಯ ರಿಜಿಸ್ಟ್ರಾರ್ ಡಾ.ಚ.ಗೋಪಾಲ್ ರೆಡ್ಡಿ, “ವಿಶ್ವವಿದ್ಯಾಲಯ ಪ್ರವೇಶಿಸಿ ಭಾಷಣ ಮಾಡಲು ನಾವು ಸಂಸದ ತೇಜಸ್ವಿ ಸೂರ್ಯ ಅವರಿಗೆ ಯಾವುದೇ ಅನುಮತಿ ನೀಡಿರಲಿಲ್ಲ. ಇಂತಹ ರಾಜಕೀಯ ಘಟನೆಗಳನ್ನು ವಿಶ್ವವಿದ್ಯಾಲಯದಲ್ಲಿ ಅನುಮತಿಸಲಾಗುವುದಿಲ್ಲ. ಉಪಕುಲಪತಿಗಳ ನಿರ್ದೇಶನದ ಮೇರೆಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿಗಳು “ಉಸ್ಮಾನಿಯಾ ವಿವಿ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 447 ರ ಅಡಿಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಅತಿಕ್ರಮಣ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ತಿಳಿಸಿದ್ಧಾರೆ.

Exit mobile version